ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತವು ಶೈಕ್ಷಣಿಕ ವ್ಯವಸ್ಥೆಯ ನರವ್ಯೂಹ: ಶಿಕ್ಷಣಾಧಿಕಾರಿ ಅಶೋಕ್

Last Updated 4 ಡಿಸೆಂಬರ್ 2021, 15:10 IST
ಅಕ್ಷರ ಗಾತ್ರ

ಕೋಲಾರ: ‘ಜಗತ್ತು ಉದಯ ಆದಾಗಿನಿಂದಲೂ ಅದರೊಟ್ಟಿಗೆ ಗಣಿತವೂ ಸಾಗಿಬಂದಿದೆ. ಪ್ರತಿಯೊಂದಕ್ಕೂ ಗಣಿತ ಲೆಕ್ಕಾಚಾರ ಬೇಕೇಬೇಕು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಸಂತಸದಿಂದ ಕಲಿಯಲು ಶಿಕ್ಷಕರು ನೆರವಾಗಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸಲಹೆ ನೀಡಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಗಣಿತವು ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ. ವಿದ್ಯಾರ್ಥಿಗಳು ಗಣಿತ ವಿಷಯವನ್ನು ಪ್ರೀತಿಸಿ, ಗೌರವಿಸಿ, ತಾವು ಒಬ್ಬ ರಾಮಾನುಜನ್ ಆಗಬೇಕೆಂಬ ಸ್ಫೂರ್ತಿಯಿಂದ ಮುನ್ನಡೆದರೆ ಸುಲಭವಾಗುತ್ತದೆ. ಮಕ್ಕಳಿಗೆ ಗಣಿತ ಎಂದರೆ ಜೀವನದ ಲೆಕ್ಕಾಚಾರವಿದ್ದಂತೆ. ಇದನ್ನು ಶಿಕ್ಷಕರು ತಿಳಿಸುವ ಮೂಲಕ ಜೀವನದ ಪಾಠ ಕಲಿಸಬೇಕು. ಶಿಕ್ಷಕರು ಗಣಿತವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಲೆಕ್ಕಗಳ ಮೂಲಕ ತಿಳಿಸಬೇಕು’ ಎಂದರು.

‘ಗಣಿತ ಕ್ಷೇತ್ರಕ್ಕೆ ರಾಮಾನುಜನ್, ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯರಂತಹ ತಜ್ಞರನ್ನು ಭಾರತ ಕೊಡುಗೆಯಾಗಿ ನೀಡಿದೆ. ಸೊನ್ನೆಯನ್ನು ಕೊಡುಗೆಯಾಗಿ ನೀಡಿದ ದೇಶ ಮುಂಚೂಣಿಯಲ್ಲಿದೆ. ಗಣಿತ ಶಿಕ್ಷಣ ಪಡೆದುಕೊಂಡವರಿಗೆ ಉದ್ಯೋಗಾವಕಾಶ ಸಿಗುತ್ತಿದೆ. ಗಣಿತವು ವಿಜ್ಞಾನ, ಅರ್ಥಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳೊಂದಿಗೆ ಸಂಬಂಧ ಹೊಂದಿದೆ’ ಎಂದು ತಿಳಿಸಿದರು.

ಜೀವನದಲ್ಲಿ ಹಾಸುಹೊಕ್ಕು: ‘ಗಣಿತ ಹುಟ್ಟಿನಿಂದ ಸಾಯುವವರೆಗೂ ಇಡೀ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಕುಟುಂಬ ನಿರ್ವಹಣೆಯಲ್ಲೂ ಗಣಿತ ಪ್ರಮುಖ ಪಾತ್ರ ವಹಿಸುತ್ತದೆ. ಗಣಿತ ಕಷ್ಟವಲ್ಲ ಎಂಬುದನ್ನು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು’ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ವಿ.ಕೃಷ್ಣಪ್ಪ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT