ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಗಿಮಿಕ್‌ಗೆ ಮೇಕೆದಾಟು ಮಾತು: ಸಂಸದ ಮುನಿಸ್ವಾಮಿ ಟೀಕೆ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಸಂಸದ ಮುನಿಸ್ವಾಮಿ ಟೀಕೆ
Last Updated 1 ಜನವರಿ 2022, 12:25 IST
ಅಕ್ಷರ ಗಾತ್ರ

ಕೋಲಾರ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಚುನಾವಣಾ ಗಿಮಿಕ್‌ಗಾಗಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಅವರದೇ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆ ನೆನಪಿಗೆ ಬರಲಿಲ್ಲವೇ’ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ವಿಚಾರದಲ್ಲಿ ಕೈಕಟ್ಟಿ ಕುಳಿತಿಲ್ಲ. ಯೋಜನೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದ್ದು, ಯೋಜನೆ ಜಾರಿ ಸಂಬಂಧ ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದರು.

‘ನಮ್ಮ ಸರ್ಕಾರ ಜನರ ಪರವಾಗಿದೆ. ಮೇಕೆದಾಟು ಯೋಜನೆ ಕೇವಲ ಕನಕಪುರಕ್ಕೆ ಸೀಮಿತವಲ್ಲ. ಖಂಡಿತ ನಾವು ನಮ್ಮ ಪಾಲಿನ ನೀರು ಪಡೆದುಕೊಳ್ಳುತ್ತೇವೆ. ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್‌) ಕೋಲಾರ ಜಿಲ್ಲೆಯನ್ನು ಕೈಬಿಟ್ಟರೆ ಮತ್ತೆ ಹೊಸ ಡಿಪಿಆರ್‌ ಮಾಡಿಸಿ ಅದರಲ್ಲಿ ಜಿಲ್ಲೆಯನ್ನು ಸೇರ್ಪಡೆ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಎತ್ತಿನಹೊಳೆ ಯೋಜನೆ ಕಾಮಗಾರಿ ಚುರುಕುಗೊಳಿಸುತ್ತೇವೆ. ಕೃಷ್ಣಾ ನದಿ ನೀರಿನಲ್ಲಿ ಜಿಲ್ಲೆಗೂ ಪಾಲು ಕೊಡುವಂತೆ ನಾನು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜತೆ ಚರ್ಚೆ ಮಾಡಿದ್ದೇವೆ. ನೀರಾವರಿ ಯೋಜನೆಗಳು ಸೇರಿದಂತೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ’ ಎಂದು ಹೇಳಿದರು.

ಪೂಜೆಗೆ ಸೀಮಿತ: ‘ಮಾಜಿ ಸಂಸದ ಮುನಿಯಪ್ಪ ಅವರು ಚುನಾವಣೆಗಾಗಿ ರೈಲ್ವೆ ಕೋಚ್‌ ಕಾರ್ಖಾನೆಗೆ ತರಾತುರಿಯಲ್ಲಿ ಭೂಮಿ ಪೂಜೆ ಮಾಡಿ ಮುಗಿಸಿದ್ದರು. ಅವರ ಯೋಜನೆ ಪೂಜೆಗಷ್ಟೇ ಸೀಮಿತವಾಗಿತ್ತು. ನಾವು ಈ ಬಗ್ಗೆ ಹೆಚ್ಚು ಗಮನಹರಿಸಿ ಕೋಚ್ ಕಾರ್ಖಾನೆ ಬದಲಿಗ ವರ್ಕ್‌ಶಾಪ್ ಆರಂಭಿಸಲು ಮುಂದಾಗಿದ್ದೇವೆ. ಇದನ್ನು ಅರಿಯದ ಮುನಿಯಪ್ಪ ಅವರು ಮಾಜಿ ಆಗಿದ್ದರೂ ಹಾಲಿ ಸಂಸದರೆಂಬಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ’ ಎಂದು ಕುಟುಕಿದರು.

‘ಮುನಿಯಪ್ಪ ಅವರು ಮದನಪಲ್ಲಿ, ಪುಂಗನೂರು ಸೇರಿದಂತೆ ಎಲ್ಲೆಲ್ಲಿಗೋ ಮಾತಿನಲ್ಲೇ ರೈಲು ಬಿಟ್ಟಿದ್ದಾರೆ. ಅವರ ರೈಲುಗಳು ಎಲ್ಲಿಗೆ ಹೋದವು ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಗಣಿ ಪುನರಾರಂಭ: ‘ಬಿಜಿಎಂಎಲ್‌ ಮರು ಆರಂಭದ ಸಂಬಂಧ ಕೇಂದ್ರವು ರಾಜ್ಯ ಸರ್ಕಾರಕ್ಕೆ ಜಮೀನು ಹಸ್ತಾಂತರಿಸಿದೆ. ಹಟ್ಟಿ ಚಿನ್ನದ ಗಣಿಯಂತೆಯೇ ಕೆಜಿಎಫ್‌ನಲ್ಲೂ ಗಣಿ ಕೆಲಸ ನಡೆಸಲಾಗುವುದು. ಇದರಿಂದ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಿ ಜನರ ಜೀವನ ಮಟ್ಟ ಸುಧಾರಿಸಲಿದೆ. ಭವಿಷ್ಯದಲ್ಲಿ ಬೆಂಗಳೂರು ನಂತರ ಅಭಿವೃದ್ಧಿಶೀಲ ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರ ಸಹ ಸ್ಥಾನ ಪಡೆದುಕೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕೆರೆಗಳು ಭರ್ತಿಯಾಗಿವೆ. ಸಂಸದರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲದ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸುತ್ತೇವೆ. ಜಿಲ್ಲೆಯಲ್ಲಿ ಸಂಸದರ ಕಚೇರಿ ಆರಂಭಕ್ಕೆ ಜಾಗ ಹುಡುಕುತ್ತಿದ್ದು, ವರ್ಷದೊಳಗೆ ಕಟ್ಟಡ ನಿರ್ಮಿಸುತ್ತೇವೆ. ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಹಾಗೂ ಎಪಿಎಲ್ ಪಡಿತರ ಚೀಟಿಯ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT