ಮಂಗಳವಾರ, ನವೆಂಬರ್ 19, 2019
22 °C

ಸೇನೆಗೆ ಹಾಲು: ಕೋಚಿಮುಲ್‌ಗೆ ಸಿಂಹಪಾಲು

Published:
Updated:

ಕೋಲಾರ: ರಕ್ಷಣಾ ಸಚಿವಾಲಯದ ಕೇಂದ್ರಗಳಿಗೆ ಯುಎಚ್‌ಟಿ ಹಾಲು ಪೂರೈಕೆಯಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್‌) ಸಿಂಹಪಾಲು ಸಿಕ್ಕಿದ್ದು, ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅಧ್ಯಕ್ಷರಾಗಿರುವ ಹಾಸನ ಜಿಲ್ಲಾ ಒಕ್ಕೂಟಕ್ಕೆ ಹಿನ್ನಡೆಯಾಗಿದೆ.

ರಾಜ್ಯ ಹಾಲು ಮಹಾಮಂಡಳವು (ಕೆಎಂಎಫ್‌) ಸೇನೆಗೆ ವರ್ಷಕ್ಕೆ 1 ಕೋಟಿ ಲೀಟರ್‌ ಯುಎಚ್‌ಟಿ ಹಾಲು ಪೂರೈಸಲು ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೆಎಂಎಫ್‌ ಆಡಳಿತ ಮಂಡಳಿಯು 2008ರಿಂದಲೂ ಯುಎಚ್‌ಟಿ ಹಾಲು ಪೂರೈಕೆಯ ಸಂಪೂರ್ಣ ಪಾಲನ್ನು ಕೋಚಿಮುಲ್‌ಗೆ ಹಂಚಿಕೆ ಮಾಡಿತ್ತು.

ಆದರೆ, ರೇವಣ್ಣ ಅವರು 2018ರಲ್ಲಿ ಕೋಚಿಮುಲ್‌ ಪಾಲಿನ ಹಾಲು ಪೂರೈಕೆ ಪ್ರಮಾಣ ಕಡಿತಗೊಳಿಸಿ ಹಾಸನ ಜಿಲ್ಲಾ ಹಾಲು ಒಕ್ಕೂಟದಿಂದ ಸೇನೆಗೆ ಶೇ 50ರಷ್ಟು ಹಾಲು ಸರಬರಾಜು ಮಾಡಲು ಅವಕಾಶ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಚಿಮುಲ್‌ ಆಡಳಿತ ಮಂಡಳಿಯು ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಳಿ ನಿಯೋಗ ಯುಎಚ್‌ಟಿ ಹಾಲಿನ ಪೂರ್ಣ ಪ್ರಮಾಣದ ಬೇಡಿಕೆಯನ್ನು ಒಕ್ಕೂಟಕ್ಕೆ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ರೇವಣ್ಣ ಅವರು ಒಪ್ಪಿರಲಿಲ್ಲ.

ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್‌ ಅಧ್ಯಕ್ಷರಾದ ಬೆನ್ನಲ್ಲೇ ಯುಎಚ್‌ಟಿ ಹಾಲು ಪೂರೈಕೆ ಮರು ಹಂಚಿಕೆ ಮಾಡಿ, ಕೋಚಿಮುಲ್‌ಗೆ ಗರಿಷ್ಠ ಪಾಲು ನೀಡುವ ಮೂಲಕ ರೇವಣ್ಣ ಅವರಿಗೆ ಮುಖಭಂಗವಾಗುವಂತೆ ಮಾಡಿದ್ದಾರೆ. ಹೊಸ ಒಪ್ಪಂದದಂತೆ ಕೋಚಿಮುಲ್‌ ಸೇನೆಗೆ ವರ್ಷಕ್ಕೆ 90.50 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಪೂರೈಸಲಿದೆ.

ಕೆಎಂಎಫ್‌ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದ ರೇವಣ್ಣ ಅವರ ಆಸೆಗೆ ತಣ್ಣೀರೆರಚಿದ್ದ ಬಾಲಚಂದ್ರ ಜಾರಕಿಹೊಳಿ ಇದೀಗ ಯುಎಚ್‌ಟಿ ಹಾಲು ಮಾರಾಟ ಹಂಚಿಕೆಯಲ್ಲಿ ದೊಡ್ಡ ಪೆಟ್ಟು ಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)