ಶನಿವಾರ, ಮೇ 15, 2021
24 °C

ಮಸೀದಿ: ಕೋವಿಡ್‌ ಮಾರ್ಗಸೂಚಿ ಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗಿದ್ದು, ಮಸೀದಿಗಳಲ್ಲಿ ಅಂತರ ಕಾಪಾಡಬೇಕು. ಸರ್ಕಾರದ ಮಾರ್ಗಸೂಚನೆಯಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಅಂಜುಮನ್ ಇಸ್ಲಾಮಿಯ ಸಂಘಟನೆ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯು ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಹೀಗಾಗಿ ಮಸೀದಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು’ ಎಂದು ಹೇಳಿದರು.

‘ಯುವಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು. ಮಸೀದಿಗಳಲ್ಲಿ ಕೋವಿಡ್ ಬಗ್ಗೆ ನಿರಂತರ ಪ್ರಚಾರ ಮಾಡಬೇಕು. 45 ವರ್ಷ ದಾಟಿದ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳಲು ನಿರ್ದಿಷ್ಟ ಪ್ರದೇಶ ಸೂಚಿಸಿದರೆ ಆದೇ ಪ್ರದೇಶದಲ್ಲಿ ವ್ಯವಸ್ಥೆ ಮಾಡುತ್ತೇವೆ’ ಎಂದರು.

‘ಅಂಗಡಿಗಳು ಮಾಲೀಕರು ಮಾಸ್ಕ್ ಧರಿಸದಿದ್ದರೆ ಅಥವಾ ಅಂಗಡಿ ಬಳಿ ಗ್ರಾಹಕರು ಅಂತರ ಕಾಯ್ದುಕೊಳ್ಳದಿದ್ದರೆ ₹ 500 ದಂಡ ವಿಧಿಸಿ, ಜತೆಗೆ ಅಂಗಡಿ ಮಾಲೀಕರ ವಾಣಿಜ್ಯ ಪರವಾನಗಿ ರದ್ದುಪಡಿಸಿ’ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.

‘ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಸುರಕ್ಷತಾ ಮಾರ್ಗಸೂಚಿ ಜಾರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಮಕ್ಕಳು ಹಾಗೂ 60 ವರ್ಷ ಮೀರಿದ ವಯೋವೃದ್ಧರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬರದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಂಜುಮನ್ ಇಸ್ಲಾಮಿಯ ಸಂಘಟನೆ ಜಿಲ್ಲಾ ಅಧ್ಯಕ್ಷ ಜಮೀರ್ ಅಹಮ್ಮದ್ ವಿವರಿಸಿದರು.

‘ಎಲ್ಲಾ ಮಸೀದಿಗಳ ಮುಖ್ಯಸ್ಥರೊಂದಿಗೆ ಕೋವಿಡ್ ಬಗ್ಗೆ ಚರ್ಚಿಸಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಎಪಿಎಂಸಿ ಮತ್ತು ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಿದರು.

ದಂಡ ವಿಧಿಸಲಾಗುತ್ತಿದೆ: ‘ಕೋವಿಡ್‌ ಹಿನ್ನೆಲೆಯಲ್ಲಿ ನಗರದಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸದೆ ರಸ್ತೆಗಳಲ್ಲಿ ಅಡ್ಡಾದಿಡಿ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ’ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್ ಮಾಹಿತಿ ನೀಡಿದರು.

ಅಂಜುಮನ್ ಇಸ್ಲಾಮಿಯ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಸೈಫುಲ್ಲಾ, ಖಚಾಂಚಿ ಹನೀಫ್, ಪದಾಧಿಕಾರಿಗಳಾದ ಶಾದಿಕ್ ಪಾಷಾ, ಶಬೀರ್, ಮೊಹಿನ್, ಅಯೂಬ್ ಖಾನ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು