ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ನಗರಸಭೆ ಚುನಾವಣೆ: ಮತ ಎಣಿಕೆ ಸುಸೂತ್ರ

ಎಣಿಕೆ ಕೇಂದ್ರದ ಸುತ್ತಮುತ್ತ ಜನಜಂಗುಳಿ: ವಿಜೇತ ಅಭ್ಯರ್ಥಿಗಳಿಗೆ ಜೈಕಾರ
Last Updated 14 ನವೆಂಬರ್ 2019, 16:44 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ 3 ನಗರಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಸುಸೂತ್ರವಾಗಿ ನಡೆಯಿತು.

ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆಗೆ ನ.12ರಂದು ಚುನಾವಣೆ ನಡೆದಿತ್ತು. ಆಯಾ ನಗರಸಭೆಗಳ ವ್ಯಾಪ್ತಿಯಲ್ಲೇ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾದಾಗ ಕೇಂದ್ರಗಳ ಬಳಿ ಬೆರಳೆಣಿಕೆ ಜನರಿದ್ದರು. ಸಮಯ ಕಳೆದಂತೆ ಜನಜಂಗುಳಿ ಹೆಚ್ಚುತ್ತಾ ಹೋಯಿತು.

ಮತ ಎಣಿಕೆ ಮುಂದುವರಿದಂತೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಎದೆಯಲ್ಲಿ ಸೋಲು ಗೆಲುವಿನ ಢವ ಢವ ಶುರುವಾಯಿತು. ಕೋಲಾರ ಮತ್ತು ಮುಳಬಾಗಿಲು ನಗರಸಭೆಗಳ ಮತ ಎಣಿಕೆ ಪ್ರಕ್ರಿಯೆ ತ್ವರಿತವಾಗಿ ನಡೆಯಿತು. ಆದರೆ, ಕೆಜಿಎಫ್‌ ನಗರಸಭೆ ಮತ ಎಣಿಕೆ ನಿಧಾನ ಗತಿಯಲ್ಲಿ ಸಾಗಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೂರೂ ನಗರಸಭೆಗಳ ಅಂತಿಮ ಫಲಿತಾಂಶ ಪ್ರಕಟವಾಯಿತು.

ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ವಿಜೇತ ಅಭ್ಯರ್ಥಿಗಳು ಎಣಿಕೆ ಕೇಂದ್ರದಿಂದ ಹೊರ ಬಂದು ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಸಂತಸ ಹಂಚಿಕೊಂಡರು. ಪಕ್ಷಗಳ ಕಾರ್ಯಕರ್ತರು ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

ಬೆಂಬಲಿಗರು ಅಭ್ಯರ್ಥಿಗಳಿಗೆ ಹೂವಿನ ಹಾರ ಹಾಕಿ ವಾರ್ಡ್‌ಗಳಲ್ಲಿ ಮೆರವಣಿಗೆ ಮಾಡಿದರು. ಅಲ್ಲದೇ, ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕೆಲ ಅಭ್ಯರ್ಥಿಗಳು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ದಾರಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಹೂವಿನ ಸುರಿಮಳೆ ಸುರಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕೈ ಮುಗಿದು ಧನ್ಯವಾದ ಸಲ್ಲಿಸಿದರು.

ಸಂಚಾರ ನಿರ್ಬಂಧ: ಕೋಲಾರ ಮತ ಎಣಿಕೆ ಕೇಂದ್ರದ ಮುಂಭಾಗದ ಬಂಗಾರಪೇಟೆ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಮಧ್ಯಾಹ್ನದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಅಭ್ಯರ್ಥಿಗಳ ಬೆಂಬಲಿಗರು, ಏಜೆಂಟರು ಹಾಗೂ ಪಕ್ಷಗಳ ಕಾರ್ಯಕರ್ತರ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಆವರಣ, ಸಿ.ಬೈರೇಗೌಡ ನಗರ, ಜಿಲ್ಲಾ ಪಂಚಾಯಿತಿ ಮುಂಭಾಗದ ಲಾರಿ ನಿಲ್ದಾಣ, ಮಣಿಘಟ್ಟ ರಸ್ತೆ, ನಚಿಕೇತನ ವಿದ್ಯಾರ್ಥಿನಿಲಯದ ಆವರಣ, ಕೋಲಾರಮ್ಮ ದೇವಸ್ಥಾನದ ಮುಂಭಾಗ, ಇಟಿಸಿಎಂ ವೃತ್ತ, ಕೆಇಬಿ ಕಚೇರಿ ಮುಂದೆ, ಮೆಥೋಡಿಸ್ಟ್ ಶಾಲೆ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಕೇಂದ್ರಕ್ಕೆ ನಡೆದು ಬಂದರು.

ಗುರುತಿನ ಚೀಟಿ ಹೊಂದಿದ್ದವರಿಗೆ ಮಾತ್ರ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಪೊಲೀಸರು ಪ್ರತಿ ವ್ಯಕ್ತಿಯನ್ನು ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡಿದ ನಂತರವಷ್ಟೇ ಕೇಂದ್ರದೊಳಗೆ ಹೋಗಲು ಅವಕಾಶ ನೀಡಿದರು. ಮತ ಎಣಿಕೆ ಮುಂದುವರಿದಂತೆ ಸೋಲಿನ ಸುಳಿವರಿತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೇಂದ್ರದಿಂದ ನಿರ್ಗಮಿಸಿದರು.

ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಹಾಗೂ ಭದ್ರತಾ ಕಾರ್ಯದಲ್ಲಿದ್ದ ಪೊಲೀಸರಿಗೆ ಬೆಳಿಗ್ಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿ ಬಾತ್‌ ನೀಡಲಾಯಿತು. ಕೇಂದ್ರದ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪೊಲೀಸರ ಜತೆಗೆ  ಗೃಹರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT