ಶನಿವಾರ, ಮಾರ್ಚ್ 28, 2020
19 °C
ಸಮ್ಮಿಲನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಸಲಹೆ

ಪ್ರತಿಭೆಗೆ ಅವಕಾಶ ಕಲ್ಪಿಸಲು ಮುಂದಾಗಿ: ವಿ.ಆರ್.ಸುದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಮಾಜದಲ್ಲಿರುವ ಪ್ರತಿಭೆಗಳಿಗೆ ಅವಕಾಶಗಳು ದೊರೆಯದ ಕಾರಣದಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ಗಾಣಿಗರ ಸಂಘದಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ಗಾಣಿಗ ಬಂಧುಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಕಡಿಮೆ ಜನ ಸಂಖ್ಯೆಯಲ್ಲಿರುವ ಸಮುದಾಯದಲ್ಲೂ ಪ್ರತಿಭೆಗಳು ಇದ್ದಾರೆ. ಅವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು, ಮುಖಂಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡ ಮಾತ್ರ ಸಮುದಾಯಕ್ಕೆ ಸಹಾಯ ಮಾಡಬಾರದು ಎಂಬ ಮಾನೋಭಾವನೆ ಬದಲಾಗಬೇಕು’ ಎಂದರು.

‘ಅತಿಯಾದ ಪ್ರೇಮವೆ ಮುಂದೊಂದು ದಿನ ಸಮುದಾಯಗಳ ಮೇಲೆ ಪರಿಣಾಮ ಬೀರುವ ಭೀತಿ ಕಾಡುತ್ತಿದೆ. ಗಾಣಿಗ ಸಮುದಾಯದವರು ಬೇರೆ ಸಮುದಾಯಗಳ ಜತೆ ಹೊಂದಾಣಿಕೆಯಿಂದ ಸಂಘಟಿತರಾಗುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

‘ಯುವಕರು ಹೆಚ್ಚಾಗಿ ಮೊಬೈಲ್‌ ಬಳಕೆಗೆ ಮಾರು ಹೋಗಿದ್ದು, ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ವಾತಾವರಣ ಪೋಷಕರು ಸೃಷ್ಟಿಸಬೇಕು. ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದು ಕಿವಿಮಾತು ಹೇಳಿದರು.

ಅಖಿಲ ಭಾರತೀಯ ತೈಲಿಕ್ ಸಾಹೂ ಮಹಾಸಭಾ ಅಧ್ಯಕ್ಷ ಪಿ.ಎಂ.ರಘುನಾಥ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಣಬಲ, ತೋಳ್ಬಗಲ ಇರುವವರು ಸ್ವತ್ತಾಗಿದೆ. ಸಾಮಾನ್ಯ ಪ್ರಜೆ ಚುನಾವಣೆ ಎದುರಿಸಲು ಕಷ್ಟವಾಗಿದ್ದು, ಇಂತಹ ಸದರ್ಭದಲ್ಲಿ ಸಮುದಾಯವೂ ನಿರ್ಣಾಯಕ ಪಾತ್ರವಹಿಸುವತ್ತ ಚಿಂತಿಸಬೇಕು’ ಎಂದು ಎಚ್ಚರಿಸಿದರು.

‘ಸಮುದಾಯದವರು ಕುಲ ಕಸುಬನ್ನು ಬಿಟ್ಟಿರುವ ಕಾರಣ ಈಗ ತಯಾರಾಗುತ್ತಿರುವ ಎಣ್ಣೆ ಕಲುಷಿತಗೊಂಡಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಮ್ಮ ಮನೆಗಳಲ್ಲೇ ಎಣ್ಣೆ ತಯಾರಿಸುವ ಕಾರ್ಯ ಪ್ರಾರಂಭವಾಗಬೇಕು’ ಎಂದು ತಿಳಿಸಿದರು.

‘ಸಮುದಾಯದಲ್ಲಿ ಸಂಘಟನೆಯ ಕೊರತೆಯಿರುವ ಕಾರಣ ಸಮಸ್ಯೆಗಳು ಹೆಚ್ಚಾಗುತ್ತಿವೆ. ಗ್ರಾಮ ಮಟ್ಟದಿಂದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸಮಾಜದ ಎಲ್ಲಾ ವರ್ಗದವರ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ’ ಎಂದರು.

ಶ್ರೀನಿವಾಸ ನರ್ಸಿಂಗ್ ಹೋಂ ವೈದ್ಯ ಡಾ.ಶಂಕರ್, ಉಪನ್ಯಾಸಕ ಜೆ.ಜಿ.ನಾಗರಾಜ್, ಶಿಕ್ಷಕ ಪಿ.ಆರ್.ರವಿ, ಗಾಣಿಗ ಸಂಘದ ಸದಸ್ಯರಾದ ಸುಬ್ಬಮ್ಮ, ಕೆ.ಎನ್.ರಾಮಚಂದ್ರಪ್ಪ, ವಿ.ವೆಂಕಟೇಶ್, ಪಿಯು ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಸ್.ವೆಂಕಟಸ್ವಾಮಿ, ಅರ್‌ವಿಎಂ ಮಂಡಿ ಮಾಲೀಕ ವೆಂಕಟಾಚಲಪತಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)