ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿಗೆ ಆನ್‌ಲೈನ್‌ ವಹಿವಾಟು ವ್ಯವಸ್ಥೆ

ಸಭೆಯಲ್ಲಿ ರೈತರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ
Last Updated 8 ಏಪ್ರಿಲ್ 2020, 12:58 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿನ ಭೀತಿ ಕಾರಣಕ್ಕೆ ದಿಗ್ಬಂಧನ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮಾವು ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆಯಾಗದಂತೆ ಆನ್‌ಲೈನ್‌ ವಹಿವಾಟಿನ ವ್ಯವಸ್ಥೆ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭರವಸೆ ನೀಡಿದರು.

ಇಲ್ಲಿ ಬುಧವಾರ ನಡೆದ ಮಾವು ಬೆಳೆಗಾರರು, ವರ್ತಕರು, ಎಪಿಎಂಸಿ ಸದಸ್ಯರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಏಪ್ರಿಲ್‌ ಅಂತ್ಯಕ್ಕೆ ಮಾವು ಕೊಯ್ಲು ಆರಂಭವಾಗಲಿದ್ದು, ಮಾವಿಗೆ ಮಾರುಕಟ್ಟೆ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.

‘ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ಈ ಬಾರಿ 2.50 ಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷಿಸಲಾಗಿದೆ. ದಿಗ್ಬಂಧನದ ಕಾರಣಕ್ಕೆ ಮಾವಿನ ವಹಿವಾಟು ಮತ್ತು ರಫ್ತಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಆಂಧ್ರಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮಾವಿನ (ಪಲ್ಪ್‌) ಮೌಲ್ಯವರ್ಧಿತ ಉತ್ಪನ್ನ ಕಾರ್ಖಾನೆಗಳಿವೆ. ಆ ಕಾರ್ಖಾನೆಗಳಿಗೆ ಜಿಲ್ಲೆಯಿಂದ ಮಾವಿನ ಹಣ್ಣು ಕಳುಹಿಸುವ ಸಂಬಂಧ ಅಲ್ಲಿನ ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇವೆ. ಜತೆಗೆ ಹಾಪ್‌ಕಾಮ್ಸ್‌ ಮೂಲಕ ಮಾವು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

‘ಕೆಎಂಎಫ್‌ನವರು ಏಜೆನ್ಸಿ ಮೂಲಕ ಮಾವು ಖರೀದಿಸಿ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ನಂದಿನಿ ಹಾಲು ಮಾರಾಟ ಮಳಿಗೆಗಳು, ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾವಿನ ಹಣ್ಣು ಮಾರುವ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರಿನ 720 ಅಪಾರ್ಟ್‌ಮೆಂಟ್‌ಗಳಿಗೆ ನೇರವಾಗಿ ಮಾವು ಸರಬರಾಜು ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ವಿವರಿಸಿದರು.

ಆರೋಗ್ಯ ಮುಖ್ಯ: ‘ರಾಜ್ಯದ ಶಿವಮೊಗ್ಗ, ತುಮಕೂರು, ಬೆಳಗಾವಿ ಜಿಲ್ಲೆಗಳಲ್ಲಿ ಕೋಲಾರದ ಮಾವಿಗೆ ಮಾರುಕಟ್ಟೆ ಕಲ್ಪಿಸುತ್ತೇವೆ. ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಭಾಗಕ್ಕೆ ಮಾವು ಕಳುಹಿಸುವುದು ಬೇಡ. ವ್ಯಾಪಾರಕ್ಕಿಂತ ಜಿಲ್ಲೆಯ ರೈತರ ಆರೋಗ್ಯ ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಮಾವು ಸಾಗಣೆಗೆ ಅಡ್ಡಿಯಾಗದಂತೆ ಬೆಳೆಗಾರರು ಮತ್ತು ವಾಹನ ಚಾಲಕರಿಗೆ ಪಾಸ್‌ ನೀಡುತ್ತೇವೆ. ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಗೆ ಹೊಂದಿಕೊಂಡಂತಿರುವ ಸರ್ಕಾರಿ ಜಮೀನಿನಲ್ಲಿ ಮಾವಿನ ವಹಿವಾಟಕ್ಕೆ ಅವಕಾಶ ಕೊಡುತ್ತೇವೆ. ಮಾವು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸುತ್ತೇವೆ’ ಎಂದು ಹೇಳಿದರು.

ಕಾರ್ಮಿಕರು ಬೇಕು: ‘ಮಾವಿನ ಋತುಮಾನದಲ್ಲಿ ಮಾರುಕಟ್ಟೆಗೆ ಸುಮಾರು 10 ಸಾವಿರ ಕಾರ್ಮಿಕರು ಬೇಕು. ಆದರೆ, ಸ್ಥಳೀಯವಾಗಿ ಕಾರ್ಮಿಕರು ಲಭ್ಯರಿಲ್ಲ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಕಾರ್ಮಿಕರನ್ನು ಕರೆತರಲು ಅವಕಾಶ ಕೊಡಬೇಕು’ ಎಂದು ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷ ರಾಜೇಂದ್ರಪ್ರಸಾದ್‌ ಮನವಿ ಮಾಡಿದರು.

ಕೋಲಾರ ಎಪಿಎಂಸಿ ಅಧ್ಯಕ್ಷ ಡಿ.ಎಲ್‌.ನಾಗರಾಜ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್‌, ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT