ಸೋಮವಾರ, ಮೇ 16, 2022
22 °C
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮದ್ಯ ಮಾರಾಟಗಾರರ ಧರಣಿ

ಕೋಲಾರ: ಆನ್‌ಲೈನ್‌ನಲ್ಲಿ ಮದ್ಯ ವಹಿವಾಟಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಆನ್‌ಲೈನ್‌ನಲ್ಲಿ ಮದ್ಯದ ವಹಿವಾಟು ನಿರ್ಬಂಧಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಕೋವಿಡ್‌ನಿಂದ ಮದ್ಯದ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಲಾಕ್‌ಡೌನ್‌ ಅವಧಿಯಲ್ಲಿ ಮದ್ಯದ ವಹಿವಾಟು ಸ್ಥಗಿತಗೊಂಡಿದ್ದರಿಂದ ಮದ್ಯದಂಗಡಿಗಳ ಬಂದ್‌ ಆಗಿದ್ದರಿಂದ ಆರ್ಥಿಕ ಸಮಸ್ಯೆಯಾಗಿದೆ. ಸರ್ಕಾರ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ ವಿವಿಧ ಕ್ಷೇತ್ರಗಳಂತೆ ಮದ್ಯದ ಉದ್ಯಮಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ದಿನಕ್ಕೊಂದು ಕಾನೂನು ಜಾರಿಗೆ ತಂದು ಉದ್ಯಮದ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸುತ್ತಿದೆ’ ಎಂದು ಸಂಘದ ಅಧ್ಯಕ್ಷ ವಿ.ಎ.ವೆಂಕಟಾಚಲಪತಿ ಆರೋಪಿಸಿದರು.

‘ಅಬಕಾರಿ ಇಲಾಖೆ ಅಧಿಕಾರಿಗಳು ಕಾನೂನಿನ ನೆಪದಲ್ಲಿ ಲಂಚಕ್ಕಾಗಿ ಮದ್ಯದಂಗಡಿ ಮಾಲೀಕರನ್ನು ಶೋಷಿಸುತ್ತಿದ್ದಾರೆ. ಲಂಚ ಕೊಡದಿದ್ದರೆ ಅಂಗಡಿ ಬಂದ್‌ ಮಾಡಿಸುವುದಾಗಿ ಬೆದರಿಸುತ್ತಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳ ಕಿರುಕುಳದಲ್ಲಿ ವಹಿವಾಟು ನಡೆಸುವುದೇ ಕಷ್ಟವಾಗಿದೆ’ ಎಂದು ಹೇಳಿದರು.

ಅಧಿಕಾರಿಗಳ ಆಟಾಟೋಪ: ‘ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಠಿಕಾಣಿ ಹೂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳ ಆಟಾಟೋಪ ಮೇರೆ ಮೀರಿದೆ. ಕೋವಿಡ್‌ ಕಾರಣಕ್ಕೆ ಮದ್ಯದ ವಹಿವಾಟು ಕುಸಿದಿದ್ದು, ಆದಾಯ ಕಡಿಮೆಯಾಗಿದೆ. ಅಂಗಡಿ ಬಾಡಿಗೆ, ಪರವಾನಗಿ ನವೀಕರಣ ಶುಲ್ಕ, ದುಬಾರಿ ವಿದ್ಯುತ್‌ ಬಿಲ್‌, ಕೆಲಸಗಾರರ ಸಂಬಳದ ಹೊರೆ ನಡುವೆ ವಹಿವಾಟು ನಡೆಸುವುದು ದುಸ್ತರವಾಗಿದೆ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ಅನಗತ್ಯ ಸನ್ನದು ಬಂದ್ ಮಾಡುವ ಕುರಿತ ಅಬಕಾರಿ ಕಾಯ್ದೆ 22(1)ನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಉದ್ಯಮದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರೂ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ಕೋಟಿಗಟ್ಟಲೇ ಅಬಕಾರಿ ತೆರಿಗೆ ಬರುತ್ತದೆ. ಆದರೆ, ಸರ್ಕಾರಕ್ಕೆ ಮದ್ಯ ಮಾರಾಟಗಾರರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರ ಬೇಡಿಕೆ ಈಡೇರಿಸುವ ಬದಲು ಮದ್ಯ ಮಾರಾಟಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆನ್‌ಲೈನ್‌ ಬೇಡ: ‘ಆನ್‌ಲೈನ್‌ನಲ್ಲಿ ಮದ್ಯದ ವಹಿವಾಟಿಗೆ ಅವಕಾಶ ನೀಡುವ ಪ್ರಸ್ತಾವ ಕೈಬಿಡಬೇಕು. ಅಬಕಾರಿ ಇಲಾಖೆ ಅಧಿಕಾರಿಗಳ ಬೇನಾಮಿ ಆಸ್ತಿ ಹಾಗೂ ಮದ್ಯದ ಸನ್ನದುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹಲವು ವರ್ಷಗಳಿಂದ ಒಂದೇ ಕಡೆ ಸೇವೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಪೊಲೀಸರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

‘ವರಮಾನ ಸೋರಿಕೆ ವಿಚಾರದಲ್ಲಿ ಮಾಹಿತಿ ನೀಡಿದಾಗ ಕ್ರಮ ಕೈಗೊಳ್ಳಬೇಕು. ಉದ್ಯಮಕ್ಕೆ ಅಪಾಯಕಾರಿ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕು. 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾ.ಪಂ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕ ಸನ್ನದು ಆರಂಭಿಸಲು ನೀಡಿರುವ ಆದೇಶ ರದ್ದುಪಡಿಸಬೇಕು. ಲಾಭಾಂಶ ಪ್ರಮಾಣ ಶೇ 20ಕ್ಕೆ ಹೆಚ್ಚಿಸಬೇಕು. ರಾಜ್ಯದೆಲ್ಲೆಡೆ ಏಕರೂಪ ಸನ್ನದು ಶುಲ್ಕ ವಿಧಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಕೆ.ಎನ್.ಜಯಣ್ಣ, ಅಪ್ಪಿರೆಡ್ಡಿ, ಜಗದೀಶ್, ಬಿ.ರಮೇಶ್‌ಕುಮಾರ್, ಅಭಿಲಾಷ್, ಚಂದ್ರಪ್ಪ, ಪ್ರಶಾಂತ್‌, ಹೇಮಂತ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.