ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ಯಗೋಷ್ಠಿ ಅಬ್ಬರ ಮಿತಿ ಮೀರಿದೆ

ರಾಜ್ಯ ಸುಗಮ ಸಂಗೀತ ಪರಿಷತ್‌ ಗೌರವಾಧ್ಯಕ್ಷ ಮುದ್ದುಕೃಷ್ಣ ಕಳವಳ
Last Updated 9 ಮೇ 2019, 14:04 IST
ಅಕ್ಷರ ಗಾತ್ರ

ಕೋಲಾರ: ‘ವಾದ್ಯಗೋಷ್ಠಿಗಳ ಅಬ್ಬರ ಮತ್ತು ಹಾವಳಿ ಮಿತಿ ಮೀರಿದ್ದು, ಸುಗಮ ಸಂಗೀತ ಗಾಯನಕ್ಕೆ ಅವಕಾಶ ಕಡಿಮೆಯಾಗುತ್ತಿವೆ’ ಎಂದು ರಾಜ್ಯ ಸುಗಮ ಸಂಗೀತ ಪರಿಷತ್‌ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ, ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಎಸ್‌ಎಸ್‌ ಅವರ ಸ್ಮಾರಕ ಚಂಪೂಗಾಯನ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಮನರಂಜನೆ ಉದ್ದೇಶದ ಸುಗಮ ಸಂಗೀತಕ್ಕೆ ಗಮಕ ಮತ್ತು ಜನಪದ ಸಂಗೀತ ಭದ್ರ ಬುನಾದಿಯಾಗಿದ್ದವು. ಮರಾಠಿ ಭಾಷೆಯಿಂದ ಬಂದ ನಾಟ್ಯ ಪ್ರಕಾರದ ಸಂಗೀತದಿಂದ ನಮ್ಮಲ್ಲಿ ಬೇರೆ ಬೇರೆ ಕಾವ್ಯ ಪ್ರಕಾರಗಳಿಗೆ ಸಂಗೀತ ನುಡಿಸಲು ಪ್ರೇರಣೆಯಾಯಿತು. ಕವಿತೆಯು ಪುಸ್ತಕದಲ್ಲಿದ್ದರೆ ಪ್ರಯೋಜವಿಲ್ಲ. ಕಾವ್ಯದ ಶಕ್ತಿಯನ್ನು ಗಾಯನದ ಮೂಲಕ ತೋರಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಸುಗಮ ಸಂಗೀತವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಕೆಲ ಸಾಹಿತಿ-ಗಳು ಹಾಗೂ ಕಲಾವಿದರು 1990ರಲ್ಲಿ ಧ್ವನಿ ಸಂಸ್ಥೆಯಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಹುಟ್ಟು ಹಾಕಿದರು. ಆದರೆ, ಪರಿಷತ್ತನ್ನು ಪ್ರಾಮಾಣಿಕ ಪ್ರಯತ್ನದಿಂದ ಒಗ್ಗೂಡಿಸಿ ಬೆಳೆಸಿಕೊಂಡು ಹೋಗುವ ಹಂಬಲ ಈಗಿನ ಪೀಳಿಗೆಯಲ್ಲಿ ಕಾಣಿಸುತ್ತಿಲ್ಲ’ ಎಂದು ವಿಷಾದಿಸಿದರು.

‘ಕನ್ನಡ ಕಾವ್ಯವು ಬೇರೆ ಬೇರೆ ರಾಜ್ಯಗಳ ಭಾಷೆಗಿಂತ ವಿಭಿನ್ನವಾಗಿದೆ. ಕವಿತೆಗೆ ತನ್ನದೇ ಆದ ಧ್ವನಿ ಮತ್ತು ಚಿತ್ರಣ ಇರುತ್ತದೆ. ಅಂತಹ ಕವಿತೆಯೊಳಗೆ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಅದರೊಳಗೆ ಅಡಗಿರುವ ಆಂತರ್ಯದ ಧ್ವನಿ ಮತ್ತು ಚಿತ್ರಣವನ್ನು ಸಂಯೋಜನೆ ಮೂಲಕ ಹೊರತರಲು ಸಾಧ್ಯ’ ಎಂದು ಹೇಳಿದರು.

ಎಚ್ಚರಿಕೆಯಿಂದಿರಿ: ‘ಸಾಹಿತ್ಯದ ಅಂತರಾಳದಲ್ಲಿ ಒಳ ನೋಟಗಳನ್ನು ಗದ್ಯದಲ್ಲಿ ಹಾಡುವ ಜತೆಗೆ ಹಳೆ ಬೇರು ಹೊಸ ಚಿಗುರು ಶೈಲಿಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವಕ ಯುವತಿಯರು ಶಸ್ತ್ರ ಮತ್ತು ಶಾಸ್ತ್ರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಸಾಹಿತಿ ಚಂದ್ರಶೇಖರ ನಂಗಲಿ ಸಲಹೆ ನೀಡಿದರು.

‘ಮನುಷ್ಯನ ನೋವು ಕಷ್ಟ ಕಡಿಮೆ ಮಾಡುವ ಸಾಹಿತ್ಯವನ್ನು ಜಿ.ಎಸ್‌.ಶಿವರುದ್ರಪ್ಪ ರಚಿಸಿದ್ದಾರೆ. ಸಾಹಿತ್ಯದಿಂದ ನಮ್ಮ ಬದುಕು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಾಗುತ್ತದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡೊಮಿನಿಕ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಂಜುನಾಥ ಆರಾಧ್ಯ, ಸಾಹಿತಿ ನಟರಾಜ ಬೂದಾಳ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT