ಶನಿವಾರ, ಜೂನ್ 19, 2021
21 °C
ಹಣ ಸಂಪಾದನೆಗೆ ಕಳ್ಳದಾರಿ ಹಿಡಿದ ಔಷಧ ಮಾರಾಟ ಮಳಿಗೆ ಮಾಲೀಕರು

ಜನರ ‘ಪಲ್ಸ್‌’ ಹೆಚ್ಚಿಸಿದ ಆಕ್ಸಿಮೀಟರ್‌ ಬೆಲೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದಂತೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಅಳೆಯುವ ಪಲ್ಸ್‌ ಆಕ್ಸಿಮೀಟರ್‌ ಉಪಕರಣದ ಬೆಲೆ ಗಗನಕ್ಕೇರಿದೆ.

ಕೋವಿಡ್‌ 2ನೇ ಅಲೆ ತೀವ್ರಗೊಳ್ಳುವುದಕ್ಕೂ ಮುನ್ನ ಮಾರ್ಚ್‌ ಅಂತ್ಯದವರೆಗೆ ಪಲ್ಸ್‌ ಆಕ್ಸಿಮೀಟರ್‌ ಉಪಕರಣದ ಬೆಲೆ ಸ್ಥಿರವಾಗಿತ್ತು. ಜಿಲ್ಲೆಯ ಬಹುಪಾಲು ಔಷಧ ಮಾರಾಟ ಮಳಿಗೆಗಳಲ್ಲಿ ಸುಲಭವಾಗಿ ಈ ಉಪಕರಣ ಸಿಗುತ್ತಿತ್ತು.

ಏಪ್ರಿಲ್‌ ಮೊದಲ ವಾರದಲ್ಲಿ ಕೋವಿಡ್‌ 2ನೇ ಅಲೆಯ ಬಿರುಗಾಳಿ ಆರಂಭವಾಗುತ್ತಿದ್ದಂತೆ ಪಲ್ಸ್‌ ಆಕ್ಸಿಮೀಟರ್‌ಗೆ ಏಕಾಏಕಿ ಬೇಡಿಕೆ ಹೆಚ್ಚಿದೆ. ಕೊರೊನಾ ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ಸಾಮಾನ್ಯವಾಗಿದ್ದು, ಸೋಂಕಿತರು ರಕ್ತದಲ್ಲಿನ ಆಮ್ಲಜನಕ ಪ್ರಮಾಣ ತಿಳಿಯುವ ಉದ್ದೇಶಕ್ಕೆ ಪಲ್ಸ್‌ ಆಕ್ಸಿಮೀಟರ್‌ನ ಮೊರೆ ಹೋಗುತ್ತಿದ್ದಾರೆ.

ಹಣ ಸಂಪಾದನೆಗಾಗಿ ಕಳ್ಳದಾರಿ ಹಿಡಿದಿರುವ ಔಷಧ ಮಾರಾಟ ಮಳಿಗೆಗಳ ಮಾಲೀಕರು ಪರಿಸ್ಥಿತಿಯ ಲಾಭ ಪಡೆದು ಪಲ್ಸ್‌ ಆಕ್ಸಿಮೀಟರ್‌ನ ಬೆಲೆ ಹೆಚ್ಚಿಸಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಪಲ್ಸ್‌ ಆಕ್ಸಿಮೀಟರ್‌ ಉಪಕರಣಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದು, ಎಲ್ಲೆಡೆ ಬೆಡ್‌ ಮತ್ತು ವೈದ್ಯಕೀಯ ಆಮ್ಲಜನಕಕ್ಕೆ ಹಾಹಾಕಾರ ಶುರುವಾಗಿದೆ. ಬೆಡ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಬೇಸತ್ತಿರುವ ಸೋಂಕಿತರು ತಮ್ಮ ಮನೆಗಳಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಶೇ 90ರಷ್ಟು ಸೋಂಕಿತರು ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಣ ಕೊಟ್ಟರೂ ಸಿಗುತ್ತಿಲ್ಲ: ಕೊರೊನಾ ಸೋಂಕಿತರ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಪ್ರತಿನಿತ್ಯ ಸಾವು ಸಂಭವಿಸುತ್ತಿವೆ. ಇದರಿಂದ ಆತಂಕಗೊಂಡಿರುವ ಸೋಂಕಿತರು ನಿಯಮಿತವಾಗಿ ತಮ್ಮ ರಕ್ತದಲ್ಲಿನ ಆಮ್ಲಜನಕ ಮತ್ತು ಹೃದಯ ಬಡಿತದ ಪ್ರಮಾಣ ತಿಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕೋವಿಡ್‌ ಮೊದಲ ಅಲೆಯಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗೆ ಬೇಡಿಕೆ ಹೆಚ್ಚಿ ಬೆಲೆ ಏರಿಕೆಯಾಗಿತ್ತು. ಇದೀಗ ಕೋವಿಡ್‌ 2ನೇ ಅಲೆಯಲ್ಲಿ ಪಲ್ಸ್ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಿದ್ದು, ಹಣ ಕೊಟ್ಟರೂ ಔಷಧ ಮಾರಾಟ ಮಳಿಗೆಗಳಲ್ಲಿ ಈ ಉಪಕರಣ ಸಿಗುತ್ತಿಲ್ಲ. ಮಾರ್ಚ್‌ನಲ್ಲಿ ಪಲ್ಸ್‌ ಆಕ್ಸಿಮೀಟರ್‌ ಬೆಲೆ ₹ 600ರಿಂದ ಗರಿಷ್ಠ ₹ 1,500ರವರೆಗೆ ಇತ್ತು. ಆದರೆ, ಈಗ ಈ ಉಪಕರಣದ ಬೆಲೆ ₹ 4 ಸಾವಿರದ ಗಡಿ ದಾಟಿದೆ.

ಶೇ 40ಕ್ಕೆ ಇಳಿಕೆ: ಕೊರೊನಾ 2ನೇ ಅಲೆಯಲ್ಲಿ ಹೆಚ್ಚಿನ ಸೋಂಕಿತರು ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೃತಪಡುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಮನುಷ್ಯನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 95ರಿಂದ 100ರಷ್ಟಿರಬೇಕು. ಕೊರೊನಾ ಸೋಂಕಿತರ ಪೈಕಿ ಹೆಚ್ಚಿನ ಜನರಲ್ಲಿ ಈ ಪ್ರಮಾಣ ಶೇ 40ರವರೆಗೆ ಇಳಿಕೆಯಾಗುತ್ತಿದೆ. ಆಮ್ಲಜನಕ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಸೋಂಕಿತರು ಶೀಘ್ರವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳುತ್ತಾರೆ.

ಪಲ್ಸ್‌ ಆಕ್ಸಿಮೀಟರ್‌ ಬದಲಿಗೆ ಸ್ಮಾರ್ಟ್ ಬ್ಯಾಂಡ್‌ಗಳನ್ನು ಬಳಕೆ ಮಾಡಬಹುದು. ಆಕ್ಸಿಮೀಟರ್‌ ಬೆಲೆಗೆ ಹೋಲಿಸಿದರೆ ಸ್ಮಾರ್ಟ್ ಬ್ಯಾಂಡ್‌ಗಳ ದರ ಕಡಿಮೆಯಿದೆ. ಜತೆಗೆ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಇತರೆ ಉಪಯೋಗಗಳಿಗೂ ಬಳಕೆ ಮಾಡಬಹುದು ಎಂಬುದು ವೈದ್ಯರ ಸಲಹೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು