ಬುಧವಾರ, ಜನವರಿ 27, 2021
16 °C

ಸಕಾಲಕ್ಕೆ ಬಿಲ್‌ ಪಾವತಿಸಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಚ್.ನಾಗೇಶ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಿಮಗೆ ಸಚಿವ ಮಾಧುಸ್ವಾಮಿ ಅವರಂತೆ ಗಟ್ಟಿ ದನಿಯಲ್ಲಿ ಮಾತನಾಡಿದರೆ ಸರಿ ದಾರಿಗೆ ಬರುತ್ತೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ತುಮಕೂರಿನಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಧುಸ್ವಾಮಿ ಮಾತನಾಡಿರುವುದನ್ನು ನೀವು ಕೇಳಿದ್ದೀರಿ. ಅದೇ ರೀತಿ ನಾನು ಮಾತನಾಡಿದರೆ ಸರಿಹೋಗುತ್ತದೆ. ನಾನು ಮೆತ್ತಗೆ ಮಾತಾಡುವುದರಿಂದ ನೀವು ಜಗ್ಗುವುದಿಲ್ಲ. ನಾನೂ ಅದೇ ರೀತಿ ಮಾತಾಡುವುದನ್ನು ಕಲಿಯಬೇಕು’ ಎಂದರು.

ಜಿ.ಪಂನಲ್ಲಿ ಆಗಿರುವ ಕಾಮಗಾರಿಗಳಿಗೆ ಸಕಾಲಕ್ಕೆ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ದೂರುಗಳು ಕೇಳಿ ಬಂದಿವೆ. ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರುವವರ ವಿರುದ್ಧ ಕಮಿಷನರ್‌ಗೆ ಬರೆಯಬೇಕಾಗುತ್ತದೆ ಎಂದ ಅವರು, ಬೇಜವಾಬ್ದಾರಿ ತೋರುವ ಎಲ್ಲರನ್ನೂ ವರ್ಗಾವಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾಕಷ್ಟು ಕೆಲಸಗಳು ಸಕಾಲಕ್ಕೆ ಆಗದೆ ಬಾಕಿ ಉಳಿದಿದ್ದವು. ಈಗ ಎಲ್ಲ ಸರಿ ಹೋಗುತ್ತಿರುವ ಹೊತ್ತಿನಲ್ಲಿ ಬಿಲ್ ಪಾವತಿ ಮಾಡದೆ ಸತಾಯಿಸಿದರೆ ಹೇಗೆ ಎಂದು ಕಿಡಿಕಾರಿದರು.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನೇಕ ಯೋಜನೆಗಳು ಕಾರ್ಯಗತವಾಗದೆ ನೆಲಕಚ್ಚಿವೆ. ಲ್ಯಾಂಡ್ ಆರ್ಮಿಯ ಅಧಿಕಾರಿಗಳ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ. ಸರಿಯಾಗಿ ಕೆಲಸ ಮಾಡಿ ಇಲ್ಲವಾದರೆ ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡಿದರು.

ಜನೌಷಧಿಗಳು ಅರ್ಹರಿಗೆ ಸಿಗಬೇಕು: ಪ್ರಧಾನಿ ಮೋದಿ ಕಡಿಮೆ ಬೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ದೊರಕಿಸಬೇಕು ಎನ್ನುವ ಉದ್ಧೇಶದಿಂದ ಜನೌಷಧಿ ಯೋಜನೆ ರೂಪಿಸಿದರು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಜನೌಷಧಿಗಳ ಮಾರಾಟ ಕೇಂದ್ರವನ್ನು ತೆರೆಯದೆ ಪರೋಕ್ಷವಾಗಿ ಖಾಸಗಿ ಮೆಡಿಕಲ್‌ಗಳ ಉದ್ಧಾರ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಖಾಸಗಿ ಮೆಡಿಕಲ್‌ಗಳಿವೆ. ಆದರೆ ಇರುವ ಕೇವಲ 7 ಜನೌಷಧಿ ಕೇಂದ್ರಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೋಬಳಿಗೆ ಒಂದರಂತೆ ಜನೌಷಧಿ ಕೇಂದ್ರಗಳನ್ನು ತೆರೆಯಬೇಕೆಂದು ಮುನಿಸ್ವಾಮಿ ಸೂಚಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಇಫ್ಕೋ ಕಂಪನಿಯವರು ನ್ಯಾನೋ ಫರ್ಟಿಲೈಸರ್‌ಗಳನ್ನು ಉತ್ಪಾದಿಸುತ್ತಿದ್ದು, ಈ ರಾಸಾಯನಿಕ ಗೊಬ್ಬರಗಳು ರೈತರಿಗೆ ಬಹಳ ಉಪಯುಕ್ತವಾಗಿರುವುದರಿಂದ ರೈತರಿಗೆ ಇದರ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಈ ಆನೆಗಳ ಹಾವಳಿಗೆ ತಡೆಗೋಡೆಗಳನ್ನು ಮತ್ತು ಟ್ರೆಂಚ್‍ಗಳನ್ನು ನಿರ್ಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಹೇಳಿದರು.

ಮಾರುಕಟ್ಟೆಯಲ್ಲಿ ದಲ್ಲಾಳಿ ಕಾಟ: ಕೋಲಾರ ರೇಷ್ಮೆ ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಕಾಟ ವಿಪರೀತವಾಗಿದೆ. 200 ಮಂದಿ ರೈತರು ಗೂಡು ತಂದರೆ 200 ಮಂದಿಗಿಂತ ಹೆಚ್ಚು ದಳ್ಳಾಳಿಗಳು ಅಲ್ಲಿರುತ್ತಾರೆ. ರೈತರು ತಂದ ರೇಷ್ಮೆ ಗೂಡಿನಲ್ಲಿ ಸ್ಯಾಂಪಲ್ ಹೆಸರಿನಲ್ಲಿ ಒಂದೊಂದು ಹಿಡಿ ಗೂಡು ತೆಗೆದುಕೊಂಡು ಹೋಗುತ್ತಿದ್ದಾರೆ. ನೀವು ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದ ಸಂಸದರು, ನಕಲಿ ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿ ತುಂಬಿ ಹೋಗಿದ್ದಾರೆ. ಕೂಡಲೇ ನಕಲಿ ವ್ಯಾಪಾರಿಗಳನ್ನು ಹೊರ ಹಾಕಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.‌‌

ರೈತರ ಶೋಷಣೆ ಹೆಚ್ಚಾಗಿದೆ, ರೇಷ್ಮೆ ಮಾರಾಟವಾದ ಕೂಡಲೇ ಅವರ ಕೈಗೆ ಹಣ ಸೇರಿಸಬೇಕು. ಯಾವುದೇ ರೀತಿಯಲ್ಲೂ ರೈತರಿಗೆ ವಂಚನೆ ಆಗಬಾರದು ಎಂದರು.

ಉಪಯೋಗಕ್ಕೆ ಬಾರದ ವೆಂಟಿಲೇಟರ್‌: ಮೋದಿ ಕೇರ್ ಯೋಜನೆಯಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ನಗರದ ಎಸ್ಎನ್ಆರ್ ಆಸ್ಪತ್ರೆಗೆ ವೆಂಟಿಲೇಟರ್‌ ತರಿಸಲಾಗಿದೆ. ಆದರೆ ಅದನ್ನು ಉಪಯೋಗಿಸಲು ಆಪರೇಟರ್‍ ಇಲ್ಲದೆ ಕೊಠಡಿಯಲ್ಲಿ ಹಾಕಲಾಗಿದೆ. ರಾಜ್ಯದ ಎಲ್ಲ ಕಡೆ ವೆಂಟಿಲೇಟರ್‌ಗಳು ಉಪಯೋಗ ಆಗುತ್ತಿದೆ. ಕೋಲಾರದಲ್ಲಿ ಯಾಕೆ ಆಗುತ್ತಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಅವರು ಡಿಎಚ್‍ಒ ವಿಜಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋಧಮ್ಮ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಕೆಜಿಎಫ್ ಎಸ್ಪಿ ಇಳಕ್ಕಿಯ ಕರುಣಾಗರನ್, ಜಿ.ಪಂ.ಸಿಇಒ ನಾಗರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು