ಶನಿವಾರ, ಆಗಸ್ಟ್ 13, 2022
23 °C
₹9.50 ಕೋಟಿ ವೆಚ್ಚದ ಕಾಮಗಾರಿ ಸ್ಥಗಿತಗೊಳ್ಳುವುದೇ ಎಂಬ ಜಿಜ್ಞಾಸೆ

ಕೆಜಿಎಫ್: ಅಶೋಕ ನಗರ ರಸ್ತೆ ಕಾಮಗಾರಿಗೆ ಮುಕ್ತಿ ಎಂದು?

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಆರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಶೋಕ ನಗರ ಜೋಡಿ ರಸ್ತೆಯ ಕಾಮಗಾರಿ  ಸದ್ಯದಲ್ಲಿಯೇ ಪೂರ್ಣಗೊಳ್ಳುವುದೇ ಇಲ್ಲವೇ ಪುನಃ ನ್ಯಾಯಾಲಯ ಮೆಟ್ಟಿಲು ಏರಿ ತಡೆಯಾಜ್ಞೆ ತಂದು ಕಾಮಗಾರಿ ಸ್ಥಗಿತಗೊಳ್ಳುವುದೇ ಎಂಬ ಜಿಜ್ಞಾಸೆಯಲ್ಲಿ ನಗರದ ಜನರಿದ್ದಾರೆ.

ಸ್ಕೂಲ್ ಆಫ್ ಮೈನ್ಸ್‌ನಿಂದ ಎಂ.ಜಿ.ವೃತ್ತದವರೆಗೂ ನಡೆಯಬೇಕಾಗಿದ್ದ ಜೋಡಿ ರಸ್ತೆ ಕಾಮಗಾರಿ 2013–14ನೇ ಸಾಲಿನಲ್ಲಿ ಪ್ರಾರಂಭವಾಯಿತು. ಒಟ್ಟು ₹9.50 ಕೋಟಿ ವೆಚ್ಚದ ಕಾಮಗಾರಿ ಇದಾಗಿತ್ತು. ಕಾಮಗಾರಿಗೆ ಚಾಲನೆ ದೊರೆತ ಮೇಲೆ ಸ್ಕೂಲ್ ಆಫ್ ಮೈನ್ಸ್‌ನಿಂದ ಅಶೋಕ ನಗರದವರೆಗೂ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಿತು. ಅಶೋಕ ನಗರದಲ್ಲಿ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ ನಡೆದರೂ, ಅಧಿಕಾರಿಗಳ ಮತ್ತು ನಿವಾಸಿಗಳ ನಡುವೆ ನಡೆದ ಸಂಧಾನದ ಫಲವಾಗಿ ರಸ್ತೆ ವಿಸ್ತರಣೆ ಅಳತೆಯ ಕಡಿಮೆ
ಮಾಡಲಾಯಿತು.

ನಂತರ ರಸ್ತೆ ಜೋಡಿ ರಸ್ತೆಯಾಗಿ ಪರಿವರ್ತನೆಯಾಯಿತು. ಆದರೆ ಎಂ.ಜಿ.ವೃತ್ತದಿಂದ ಕೇವಲ 600 ಮೀಟರ್ ರಸ್ತೆಯ ಎರಡೂ ಬದಿಯಲ್ಲಿ ತೆರವು ಮಾಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬದ್ಧತೆ ತೋರಲಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕಾಗಿ ₹3 ಕೋಟಿ ಮೀಸಲಿಡಲಾಗಿದೆ.

ಬಡವರ ಮನೆಗಳನ್ನು ತೆರವುಗೊಳಿಸಲು ತೋರಿದ ತಾಕತ್ತನ್ನು ಬಲಾಢ್ಯರ ಮತ್ತು ಹಣವಂತರ ಬಳಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೋರದ ಕಾರಣ, ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿ, ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿದೆ ಎಂದು
ಆರೋಪಿಸಲಾಗುತ್ತಿದೆ.

ರಸ್ತೆ ಬದಿಯಲ್ಲಿರುವ ಕೆಲವು ವರ್ತಕರು ಹೈಕೋರ್ಟ್‌ ಮೆಟ್ಟಿಲು ಏರಿ, ನಾವುಗಳು ನಗರಸಭೆಯಿಂದ ಎಲ್ಲ ದಾಖಲೆಗಳು ಹೊಂದಿದ್ದೇವೆ. ನಮಗೆ ಸೂಕ್ತ ಪರಿಹಾರ ನೀಡದೆ ತೆರವುಗೊಳಿಸಬಾರದು ಎಂಬ ವಾದವನ್ನು ಮಂಡಿಸಿದ್ದರು. ಹಲವು ವರ್ತಕರು ಸದರಿ ರಸ್ತೆ ರಾಜ್ಯದ ಮುಖ್ಯ ರಸ್ತೆ ಅಲ್ಲ. ಪಕ್ಕದ ರಸ್ತೆಯನ್ನು ಈ ರಸ್ತೆ ಎಂದು ತಪ್ಪಾಗಿ ತೋರಲಾಗುತ್ತಿದೆ ಎಂದು ಪ್ರತಿಪಾದಿಸಿದ್ದರು.

ವಾದ ಆಲಿಸಿದ್ದ ಹೈಕೋರ್ಟ್‌ ಪ್ರಕರಣದ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಜಿಲ್ಲಾಧಿಕಾರಿ ಪ್ರತಿಯೊಬ್ಬ ಅರ್ಜಿದಾರರ ಅಹವಾಲನ್ನು ಕೇಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಹಲವು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದರೂ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ವಿಸ್ತರಣೆ ಎಂದು ನಡೆಯುತ್ತದೆಯೇ ಎಂಬುದು ಇನ್ನೂ ನಿಗೂಢವಾಗಿದೆ.

ರಸ್ತೆ ಮಧ್ಯದಿಂದ 12.50 ಮೀಟರ್ ಎರಡೂ ಕಡೆಗಳಲ್ಲಿ ವಿಸ್ತರಣೆ ಆಗಬೇಕು. ಕನಿಷ್ಠ 9 ಮೀಟರ್ ಆದರೂ ವಿಸ್ತರಣೆಯಾಗಬೇಕು ಎಂಬುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಾದ. ಒಟ್ಟು 27 ಮಂದಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಕೆಲವು ಪ್ರಕರಣ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದೆ. ನ್ಯಾಯಾಲಯದ ಪ್ರಕರಣದಲ್ಲಿ ಇಲ್ಲದ ಕಟ್ಟಡಗಳನ್ನು ತೆರವು ಮಾಡಬೇಕಾಗಿದೆ. ಆದರೆ ಕಟ್ಟಡಗಳು ಜಂಟಿಯಾಗಿರುವುದರಿಂದ ಒಂದು ಕಟ್ಟಡ ಬಿದ್ದರೆ, ಉಳಿದ ಕಟ್ಟಡಕ್ಕೂ ತೊಂದರೆಯಾಗುವ ಸಂಭವ ಇದೆ. ಇದು ನ್ಯಾಯಾಲಯ ನಿಂದನೆಗೆ ಒಳಗಾಗಬಹುದು ಎಂಬ ಭೀತಿಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದ ಕಾರಣ ಮುಂದೂಡುತ್ತಲೇ ಬರಲಾಗಿದೆ.
ಆದರೆ ಅಧಿಕಾರಿಗಳ ಮತ್ತು ವರ್ತಕರ ನಡುವಿನ ಗೊಂದಲದಿಂದ ಸಾರ್ವಜನಿಕರು ರಸ್ತೆಯಲ್ಲಿ ಕಷ್ಟಪಟ್ಟು ತಿರುಗಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.