ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಸ್ವಚ್ಛತೆ ಆರೋಗ್ಯದ ಗುಟ್ಟು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಶಿಕ್ಷಣಾಧಿಕಾರಿ ಗೀತಾ ಹೇಳಿಕೆ
Last Updated 22 ನವೆಂಬರ್ 2019, 15:51 IST
ಅಕ್ಷರ ಗಾತ್ರ

ಕೋಲಾರ: ‘ಹದಿಹರೆಯದ ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆಯ ಅರಿವು ಅಗತ್ಯ. ಇದರಿಂದ ಕಲಿಕೆ ಹಾದಿ ಸುಗಮವಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಶಿಕ್ಷಣಾಧಿಕಾರಿ ಸಿ.ಗೀತಾ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ವೈಯಕ್ತಿಕ ಸ್ವಚ್ಛತೆಯಿಂದ ಆರೋಗ್ಯವಂತರಾಗಿರಬಹುದು’ ಎಂದು ಕಿವಿಮಾತು ಹೇಳಿದರು.

‘ಕುಡಿಯುವ ನೀರು, ಬಳಸುವ ತಟ್ಟೆ, ಲೋಟ ಸ್ವಚ್ಛವಾಗಿರಬೇಕು. ಊಟ ಮತ್ತು ಬಹಿರ್ದೆಸೆಯ ನಂತರ ಕೈ ತೊಳೆಯಬೇಕು. ಸ್ವಚ್ಛತೆಯಿಂದ ಮಾತ್ರ ಉತ್ತಮ ಆರೋಗ್ಯ ಸಾಧ್ಯ. ಶಾಲೆಯ ಜತೆಗೆ ಮನೆಯಲ್ಲೂ ಊಟಕ್ಕೆ ಮುನ್ನ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಇದೇ ಆರೋಗ್ಯದ ಗುಟ್ಟು’ ಎಂದು ಸಲಹೆ ನೀಡಿದರು.

‘ಮನೆ ಬಳಿ ಮತ್ತು ಗ್ರಾಮದ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಿ ಸಾಂಕ್ರಾಮಿಕ ರೋಗಗಳು ಬರುತ್ತವೆ. ಜೀವನ ಶೈಲಿ ಹಾಗೂ ಬದಲಾದ ಆಹಾರ ಪದ್ಧತಿಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಖಿನ್ನತೆ, ರಕ್ತದೊತ್ತಡ, ಮಧುಮೇಹ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ’ ಎಂದು ಹೇಳಿದರು.

‘ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ದೈಹಿಕ ಬೆಳವಣಿಗೆ ಕುಂಠಿತಗೊಂಡು ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಹೆಚ್ಚು ಮಕ್ಕಳು ಹೆಚ್ಚಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೊಳಕೆ ಕಾಳು, ಸಿರಿಧಾನ್ಯ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಸಲಹೆ ನೀಡಿದರು.

ಆಂದೋಲನ: ‘ಜಿಲ್ಲೆಯಲ್ಲಿ ನ.25ರಿಂದ ಡಿ.10ರವರೆಗೆ ಕ್ಷಯ ಮತ್ತು ಕುಷ್ಟ ರೋಗ ಪತ್ತೆ ಆಂದೋಲನ ನಡೆಸುತ್ತಿದ್ದು, ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಬಂದು ಆರೋಗ್ಯ ತಪಾಸಣೆ ಮಾಡುತ್ತಾರೆ’ ಎಂದು ವಿವರಿಸಿದರು.

‘ಕ್ಷಯ ಮತ್ತು ಕುಷ್ಟ ರೋಗದ ಲಕ್ಷಣ ಕಂಡುಬಂದಲ್ಲಿ ಮುಜುಗರವಿಲ್ಲದೆ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ದೃಢಪಟ್ಟರೆ ಉಚಿತವಾಗಿ ಔಷಧ, ಮಾತ್ರ ನೀಡಲಾಗುತ್ತದೆ. ಪ್ರತಿನಿತ್ಯ ಸ್ನಾನ ಮಾಡಬೇಕು ಮತ್ತು ಶುಭ್ರ ಬಟ್ಟೆ ಧರಿಸಬೇಕು. ಆಗಾಗ್ಗೆ ಉಗುರು ಕತ್ತರಿಸಬೇಕು’ ಎಂದು ತಿಳಿಸಿದರು.

ಜಾಗೃತಿ ಮೂಡಿಸಬೇಕು: ‘ಜಿಲ್ಲೆಯು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿದೆ. ಕೆಲವೆಡೆ ಶೌಚಾಲಯವಿದ್ದರೂ ಬಯಲು ಬಹಿರ್ದೆಸೆಗೆ ಹೋಗುವ ಪರಿಪಾಠ ಮುಂದುವರಿದಿದೆ. ಶೌಚಾಲಯ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಹೇಳಿದರು.

ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ವಾಣಿ, ಶಾಲೆಯ ಶಿಕ್ಷಕರಾದ ಭವಾನಿ, ಸುಗುಣಾ, ಎಸ್.ಅನಂತಪದ್ಮನಾಭ್, ಸಚ್ಚಿದಾನಂದಮೂರ್ತಿ, ಶ್ವೇತಾ, ಶ್ರೀನಿವಾಸಲು, ವೆಂಕಟರೆಡ್ಡಿ, ಫರೀದಾ, ಲೀಲಾ, ಸುನೀತಾ, ಡಿ.ಚಂದ್ರಶೇಖರ್, ವಸಂತಮ್ಮ, ಆಶಾ ಮೇಲ್ವಿಚಾರಕಿ ಆಶಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT