ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ವಸ್ತು ಬಳಸಿದರೆ ದಂಡ ವಿಧಿಸುತ್ತೇವೆ

Last Updated 2 ಅಕ್ಟೋಬರ್ 2018, 14:32 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಸಂಪೂರ್ಣ ನಿಷೇಧಿಸಿದ್ದು, ಸಾರ್ವಜನಿಕರು ಅಧಿಕಾರಿಗಳ ಕಣ್ತಪ್ಪಿಸಿ ಪ್ಲಾಸ್ಟಿಕ್‌ ಉತ್ಪನ್ನ ಬಳಸುತ್ತಿರುವುದು ಕಂಡುಬಂದರೆ ದಂಡ ವಿಧಿಸುತ್ತೇವೆ’ ಎಂದು ತಾಲ್ಲೂಕಿನ ಕುರಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಎಚ್ಚರಿಕೆ ನೀಡಿದರು.

ಗಾಂಧಿ ಜಯಂತಿ ಅಂಗವಾಗಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ‘ಗಾಂಧೀಜಿ ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಬದುಕಿರುವವರೆಗೂ ದೇಶಕ್ಕಾಗಿ ದುಡಿದರು. ಎಲ್ಲರೂ ಅವರ ಶ್ರಮದಾನದ ಆದರ್ಶ ಪಾಲಿಸಬೇಕು’ ಎಂದು ಹೇಳಿದರು.

‘ಗ್ರಾಮಗಳನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳದಿರುವ ಸಂಕಲ್ಪ ಮಾಡಬೇಕು. ಉತ್ತಮ ಪರಿಸರಕ್ಕಾಗಿ ಖಾಲಿ ಜಾಗಗಳಲ್ಲಿ ಸಸಿ ನೆಟ್ಟು ಬೆಳೆಸಬೇಕು. ಗಾಂಧೀಜಿಯ ಆದರ್ಶಗಳನ್ನು ಜೀವನ ಪರ್ಯಂತ ಅನುಸರಿಸಬೇಕು. ಒಂದು ದಿನಕ್ಕೆ ಅವರ ಜಯಂತಿ ಸೀಮಿತಗೊಳಿಸಿದರೆ ಪ್ರಯೋಜನವಿಲ್ಲ. ಪ್ರತಿನಿತ್ಯ ಗಾಂಧಿ ತತ್ವ ಅನುಸರಿಸಿದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ’ ಎಂದರು.

ಪ್ಲಾಸ್ಟಿಕ್‌ ಬಳಸಬಾರದು: ‘ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಪಂಚಾಯಿತಿಯನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಪಂಚಾಯಿತಿಯಾಗಿ ಘೋಷಿಸಲಾಗಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ವಸ್ತುಗಳನ್ನು ಸಾರ್ವಜನಿಕರು ಬಳಸಬಾರದು’ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮುನಿರಾಜು ಮನವಿ ಮಾಡಿದರು.

‘ಗಾಂಧೀಜಿ ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮರಾದರು. ಅಹಿಂಸೆಯ ತತ್ವದ ಹಾದಿಯಲ್ಲೇ ಮುನ್ನಡೆಯಬೇಕು. ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಜನ ಈ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು’ ಎಂದು ತಿಳಿಸಿದರು.

ಗ್ರಾ.ಪಂ ಉಪಾಧ್ಯಕ್ಷ ಎಂ.ಎನ್.ಕೃಷ್ಣಯ್ಯ, ಸದಸ್ಯರಾದ ಡಿ.ಶ್ರೀನಿವಾಸ್, ಪಾರ್ವತಮ್ಮ, ಬೈರಪ್ಪ, ಮುರಳಿಮೋಹನ್, ರಮೇಶ್, ವೆಂಕಟಾಚಲಪತಿ, ಸುದರ್ಶನ್, ಗಾಯಿತ್ರಮ್ಮ, ನಾಗರತ್ನಮ್ಮ, ಶಿವರಾಜ್, ಶಾಂತವೇಣಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT