ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಪಿಎಲ್‌ಡಿ ಬ್ಯಾಂಕ್: ₹ 1.88 ಕೋಟಿ ಲಾಭ

Last Updated 24 ಡಿಸೆಂಬರ್ 2021, 11:35 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ ₹ 1.88 ಕೋಟಿ ಲಾಭ ಗಳಿಸಿದೆ’ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ವೆಂಕಟೇಶ್ ಹೇಳಿದರು.

ಇಲ್ಲಿ ಗುರುವಾರ ನಡೆದ ಬ್ಯಾಂಕ್‌ನ 2020–21ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯ ಹಿರಿಯ ರಾಜಕೀಯ ಧುರೀಣರಾದ ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡ, ಬಿಸಪ್ಪಗೌಡರು ಆಡಳಿತ ನಡೆಸಿರುವ ಬ್ಯಾಂಕ್ ಆಗಿದ್ದು, ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಸುತ್ತೇವೆ. ಸರ್ಕಾರದ ಆದೇಶಗಳಿಗೆ ಭಂಗ ಬಾರದಂತೆ ಆರ್ಥಿಕ ಶಿಸ್ತು ಪಾಲಿಸುತ್ತೇವೆ’ ಎಂದರು.

‘ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಆದರ್ಶ ಅಳವಡಿಸಿಕೊಂಡು ಬ್ಯಾಂಕ್‌ನ ಆಡಳಿತ ನಡೆಸುತ್ತೇವೆ. ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ರೈತರ ಮನೆ ಬಾಗಿಲಿಗೆ ತಲುಪುವಂತೆ ಮಾಡುವುದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಮನವಿ ಮಾಡಿದರು.

‘ಕಳೆದ 10 ವರ್ಷಗಳಿಂದ ಬ್ಯಾಂಕ್ ಲಾಭಾಂಶವಿಲ್ಲದೆ ನಷ್ಟದ ಹಾದಿಯಲ್ಲಿ ಸಾಗಿತ್ತು. ಸುಮಾರು ₹ 7.11 ಕೋಟಿ ನಷ್ಟದಲ್ಲಿತ್ತು. ಈಗ ಗಳಿಸಿರುವ ₹ 1.88 ಕೋಟಿ ಲಾಭವನ್ನು ಕಳೆದರೆ ಉಳಿಕೆ ₹ 5.23 ಕೋಟಿ ನಷ್ಟವನ್ನು ಮುಂದೆ ಹಂತ ಹಂತವಾಗಿ ಭರ್ತಿ ಮಾಡಿ ಸರಿದೂಗಿಸಿ ಲಾಭದ ಹಾದಿಯಲ್ಲಿ ಕೊಂಡೊಯ್ಯುತ್ತೇವೆ’ ಎಂದು ಭರವಸೆ ನೀಡಿದರು.

‘ಪ್ರಸಕ್ತ ಸಾಲಿನಲ್ಲಿ ₹ 20.85 ಕೋಟಿಯ ಆಯವ್ಯಯ ಮಂಡಿಸಲಾಗಿದೆ. ₹ 17 ಕೋಟಿ ಮಂಜೂರಾತಿ ಆಗಿದ್ದು, ₹ 17.55 ಕೋಟಿ ವೆಚ್ಚ ತೋರಿಸಲಾಗಿದೆ. ₹ 1.62 ಕೋಟಿ ಹೆಚ್ಚುವರಿ ವೆಚ್ಚದೊಂದಿಗೆ ₹ 1.07 ಕೋಟಿ ಉಳಿಕೆ ತೋರಿಸಲಾಗಿದೆ’ ಎಂದು ವಿವರಿಸಿದರು.

‘ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಮರುಪಾವತಿಸಿದರೆ ಮಾತ್ರ ಬ್ಯಾಂಕ್‌ನ ಅಭಿವೃದ್ಧಿ ಸಾಧ್ಯ’ ಎಂದು ಬ್ಯಾಂಕ್‌ನ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕಿವಿಮಾತು ಹೇಳಿದರು.

ಟ್ರ್ಯಾಕ್ಟರ್‌ ಸಾಲ: ‘ಸಣ್ಣ ರೈತರಿಗೆ ಅನುಕೂಲವಾಗುವಂತೆ ಟ್ರ್ಯಾಕ್ಟರ್‌ ಸಾಲವನ್ನು 5 ಎಕರೆ ಜಮೀನು ಹೊಂದಿರುವ ರೈತರಿಗೆ ನೀಡಲಾಗುತ್ತದೆ. ₹ 4 ಲಕ್ಷ ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ನೀಡಲಾಗುವುದು’ ಎಂದು ಬ್ಯಾಂಕ್‌ನ ನಿರ್ದೇಶಕ ಸೊಣ್ಣೇಗೌಡ ತಿಳಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷೆ ಬಿ.ಎನ್.ಶೋಭಾ, ನಿರ್ದೇಶಕರಾದ ಕೃಷ್ಣೇಗೌಡ, ಬಿ.ಎನ್.ಶಿವಕುಮಾರ್, ಟಿ.ಕೆ.ಬೈರೇಗೌಡ, ಕೆ.ಸಿ.ಮಂಜುನಾಥ್, ಎಂ.ಮಂಜುನಾಥ್. ಜೆ.ಎಂ.ರಾಧಕೃಷ್ಣ, ಕೆ.ಎಂ.ಗೋವಿಂದಪ್ಪ, ಜಿ.ಅಮರೇಶ್, ಸುನಂದಮ್ಮ, ಎ.ಶಿವಕುಮಾರ್‌ ಬ್ಯಾಂಕ್‌ನ ವ್ಯವಸ್ಥಾಪಕ ಸುರೇಶ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT