ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಡಿ ಇತ್ಯರ್ಥಕ್ಕೆ ತಾಕೀತು: ಅಧಿಕಾರಿಗಳಿಗೆ ಶಾಸಕ ರಮೇಶ್‌ಕುಮಾರ್‌ ಸೂಚನೆ

Last Updated 3 ಜೂನ್ 2022, 5:03 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಕಂದಾಯ ಇಲಾಖೆ ಅಧಿಕಾರಿಗಳು ದರಖಾಸ್ತು ಹಾಗೂ ಪೋಡಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು’ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ದರಖಾಸ್ತು ಜಮೀನು ಮಂಜೂರು ಮಾಡುವ ಮುನ್ನ ಸಂಬಂಧಪಟ್ಟ ಅಧಿಕರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಕ್ರಮಬದ್ಧವಾಗಿ ಇದ್ದರೆ ಮಾತ್ರ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ಸ್ಮಶಾನ, ಕೆರೆ ಹಾಗೂ ಕಾಲುವೆಗಳ ಒತ್ತುವರಿ ತೆರವುಗೊಳಿಸಲು ಆದ್ಯತೆ ನೀಡಬೇಕು. ಸಾರ್ವಜನಿಕ ಆಸ್ತಿಗಳ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ಸ್ಮಶಾನ ರಹಿತ ಗ್ರಾಮ ಇರಬಾರದು. ಯಾವುದೇ ಗ್ರಾಮಕ್ಕೆ ಸ್ಮಶಾನ ಇಲ್ಲದಿದ್ದರೆ ಜಾಗ ಗುರುತಿಸಿ ಮಂಜೂರು ಮಾಡಬೇಕು. ಮೂಲ ಸೌಕರ್ಯದ ಸಾಲಿನಲ್ಲಿ ಸ್ಮಶಾನಕ್ಕೂ ಮಾನ್ಯತೆ ಇದೆ. ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಮಶಾನದ ಅಗತ್ಯವಿದೆ ಎಂದು ಹೇಳಿದರು.

ಬೆಸ್ಕಾಂ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಗೂ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಏನಾದರೂ ಸೌಲಭ್ಯ ಬೇಕಾಗಿದ್ದರೆ ತಿಳಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ಸಾರ್ವಜನಿಕರ ಹಿತದೃಷ್ಟಿಯಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ದೂರುಗಳಿಗೆ ಅವಕಾಶ ಇಲ್ಲದಂತೆ ಕೆಲಸ ಮಾಡಬೇಕು. ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ಹೇಳಿದರು.

ತಹಶೀಲ್ದಾರ್ ಶಿರಿನ್ ತಾಜ್, ಉಪ ತಹಶೀಲ್ದಾರ್ ಬಲರಾಮೇಗೌಡ, ಶಿರಸ್ತೇದಾರ್ ಮನೋಹರ ಮಾನೆ, ಕಂದಾಯ ನಿರೀಕ್ಷಕರಾದ ಬಿ.ವಿ. ಮುನಿರೆಡ್ಡಿ, ಗುರುರಾಜರಾವ್, ಜನಾರ್ದನ್, ವಿನೋದ್, ಹರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡ ವೆಂಕಟಾದ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT