ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ದೌರ್ಜನ್ಯ: ಹೋರಾಟದ ಎಚ್ಚರಿಕೆ

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ: ಸಂಗಮ ಸಂಸ್ಥೆ ಆರೋಪ
Last Updated 21 ಜನವರಿ 2019, 16:06 IST
ಅಕ್ಷರ ಗಾತ್ರ

ಕೋಲಾರ: ‘ಪೊಲೀಸರು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಕಿರುಕುಳ, ದೌರ್ಜನ್ಯ ನಿಲ್ಲಿಸದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಸಂಗಮ ಸಂಸ್ಥೆ ಪ್ರತಿನಿಧಿ ಅಶ್ವಿನಿ ರಾಜನ್ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಹಕ್ಕು ಉಲ್ಲಂಘಿಸುತ್ತಿದ್ದಾರೆ’ ಎಂದು ದೂರಿದರು.

‘ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆಗೆ ಕಾಯಿದೆ ರೂಪಿಸಿದೆ. ಈ ಕಾಯ್ದೆಯನ್ವಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಿತಿ ರಚಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅರಿವು ಮೂಡಿಸಲು ಕಾರ್ಯಾಗಾರ ನಡೆಸಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಾವಲಂಬಿ ಜೀವನ ನಡೆಸಲು ಉದ್ಯೋಗ ಕಲ್ಪಿಸಬೇಕು ಮತ್ತು ಕೌಶಲ ತರಬೇತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನ ಜನ್ನಘಟ್ಟ, ಕೆಂದಟ್ಟಿ, ತಂಬಳ್ಳಿ, ಮಡೇರಹಳ್ಳಿ ಸೇರಿದಂತೆ ವಿವಿಧೆಡೆ ಬಾಡಿಗೆ ಮನೆಗಳಲ್ಲಿ ವಾಸವಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಮ್ಮ ಠಾಣೆ ವ್ಯಾಪ್ತಿಯಿಂದ ಹೊರ ಹೋಗಿ ಎಂದು ಬೆದರಿಸುತ್ತಿದ್ದಾರೆ. ಮನೆ ಮಾಲೀಕರಿಗೂ ಕರೆ ಮಾಡಿ ಮನೆ ಖಾಲಿ ಮಾಡಿಸುವಂತೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿಯಿದೆ’ ಎಂದರು.

ಗೌರವ ನೀಡುತ್ತಿಲ್ಲ: ‘ಲಿಂಗತ್ವ ಎನ್ನುವುದು ವರ್ತನೆ, ಮನೋಭಾವ ಮತ್ತು ಗುಣದ ಮೇಲೆ ಆಧಾರವಾಗಿದೆ. ತಾನು ಹೆಣ್ಣೆಂದು ಗುರುತಿಸಿಕೊಳ್ಳಲು ಅವಕಾಶವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಸಂವಿಧಾನದಲ್ಲಿ ಪ್ರಜೆಗಳು ಎಂಬ ಪರಿಭಾಷೆಗೆ ನಾವೂ ಒಳಪಡುತ್ತೇವೆ. ನಮಗೂ ಸಮಾನ ಹಕ್ಕು, ಅವಕಾಶವಿದ್ದರೂ ಕನಿಷ್ಠ ಗೌರವ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಪೊಲೀಸರು ಯಾವುದೇ ವಾರಂಟ್‌ ಇಲ್ಲದೆ ಡಿ.12 ಮತ್ತು ಜ.12ರಂದು ಲೈಂಗಿಕ ಅಲ್ಪಸಂಖ್ಯಾತರ ಮನೆಗಳಿಗೆ ನುಗ್ಗಿ ಎಲ್ಲರನ್ನೂ ಹೊರಗೆ ಕಳುಹಿಸಿ ಬೀಗ ಹಾಕಿದ್ದರು. ರಾತ್ರಿ ಊಟ ಮತ್ತು ನೀರಿಲ್ಲದೆ ಪರಿತಪಿಸುವಂತಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತಂದ ನಂತರ ಸಮಸ್ಯೆ ಬಗೆಹರಿಯಿತು. ಪೊಲೀಸರ ವರ್ತನೆ ಇನ್ನಾದರೂ ಬದಲಾಗಬೇಕು’ ಎಂದು ಮನವಿ ಮಾಡಿದರು.

ಬೀದಿಗಿಳಿಯುತ್ತೇವೆ: ‘ತಾಲ್ಲೂಕಿನ ಕೆಂದಟ್ಟಿ ಬಳಿ ನಡೆದ ದರೋಡೆ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಲೈಂಗಿಕ ಅಲ್ಪಸಂಖ್ಯಾತರನ್ನು ಠಾಣಾ ವ್ಯಾಪ್ತಿಯಿಂದ ಹೊರಗೆ ಕಳುಹಿಸುವ ಪ್ರಯತ್ನ ಸರಿಯಲ್ಲ. ಪೊಲೀಸರು ದೌರ್ಜನ್ಯ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಸಂಗಮ ಸಂಸ್ಥೆ ಖಜಾಂಚಿ ರಾಧಿಕಾ, ಪ್ರತಿನಿಧಿಗಳಾದ ಕೃಷ್ಣಮೂರ್ತಿ, ನಿಷಾ, ನಿತ್ಯಾ, ಅಂಜಲಿ, ಕೃಷ್ಣಮೂರ್ತಿ, ಶ್ವೇತಾ, ಪ್ರಕೃತಿ, ಲಾವಣ್ಯ, ಹೀನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT