ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಮೀಸಲಾತಿ ಅನಿವಾರ್ಯ– ಚಂದ್ರಶೇಖರ್

ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಅಭಿಪ್ರಾಯ
Last Updated 25 ಜೂನ್ 2021, 13:45 IST
ಅಕ್ಷರ ಗಾತ್ರ

ಕೋಲಾರ: ‘ರಾಜಕೀಯ ಶಕ್ತಿಯೇ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನ ಅಸ್ತ್ರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆ ಶಕ್ತಿ ಪಡೆಯಬೇಕಾದರೆ ರಾಜಕೀಯ ಮೀಸಲಾತಿ ಅನಿವಾರ್ಯ’ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಸಂಸ್ಥಾಪಕ ಅಧ್ಯಕ್ಷ ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ನಡೆದ ಸಂಘಟನೆಯ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿ, ‘ಸಂಘಟನೆಯು ಜಿಲ್ಲೆಯಲ್ಲಿ 1995ರಲ್ಲಿ ಸ್ಥಾಪನೆಗೊಂಡು ಅನೇಕ ಹೋರಾಟ ಮಾಡಿ ದಲಿತರಿಗೆ ನ್ಯಾಯ ದೊರಕಿಸಿದೆ. ಸಂಯುಕ್ತ ರಂಗವು ದಲಿತರ ಸ್ವಾಭಿಮಾನದ ಸಂಕೇತವಾಗಿದೆ’ ಎಂದು ತಿಳಿಸಿದರು.

‘ಈಗಿನ ರಾಜಕೀಯ ಮೀಸಲಾತಿ ಅನ್ವಯ ಎಲ್ಲಾ ಜಾತಿಯ ನಾಯಕರನ್ನು ಓಲೈಸಿಕೊಂಡು ಹೋಗುವ ಅನಿವಾರ್ಯತೆ ಮೀಸಲಾತಿಯಲ್ಲಿ ಗೆದ್ದ ಎಲ್ಲಾ ಪ್ರತಿನಿಧಿಗಳಿಗೂ ಕಡ್ಡಾಯವಾಗಿದೆ. ಅಂಬೇಡ್ಕರ್ ಪೂನಾ ಒಪ್ಪಂದದಲ್ಲಿ ಕೇಳಿದ ರೀತಿ ಪರಿಶಿಷ್ಟರಿಗೆ ಪ್ರತ್ಯೇಕ ಮತದಾನ ದೊರಕಿದ್ದರೆ ಮೀಸಲಾತಿಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಈ ಸಂಕಷ್ಟ ಬರುತ್ತಿರಲಿಲ್ಲ’ ಎಂದು ಹೇಳಿದರು.

‘ಮೀಸಲಾತಿಯಲ್ಲಿ ಗೆದ್ದ ಜನಪ್ರತಿನಿಧಿಗಳು ಕೇವಲ ದಲಿತರ ಹಕ್ಕುಗಳಿಗಾಗಿ ಹೋರಾಡುವುದು ಅಸಾಧ್ಯ. ದಲಿತ ಸಂಘಟನೆಗಳು ಮಾತ್ರ ದಲಿತರ ಹಕ್ಕುಗಳಿಗಾಗಿ ಹೋರಾಡುವ ಹೊಣೆಗಾರಿಕೆ ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ ಎಂಬುದನ್ನು ಮನಗಾಣಬೇಕು. ದಲಿತ ಯುವಕರು ಅಂಬೇಡ್ಕರ್‌ ಹಾದಿಯಲ್ಲಿ ದಲಿತ ಚಳವಳಿ ಮುಂದುವರಿಸಿ ಸಮಾಜದಲ್ಲಿ ದಲಿತರಿಗೆ ದೊರೆಯಬೇಕಾದ ಹಕ್ಕುಗಳಿಗೆ ಹೋರಾಡಬೇಕು’ ಎಂದರು.

‘ಸಂಘಟನೆಯಲ್ಲಿ ಸದಸ್ಯತ್ವ ಹೊಂದಿರುವ ಎಲ್ಲಾ ಸಂಘಟನೆಗಳ ಮುಖಂಡರು ದಲಿತರ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಸಂಘದ ಕಚೇರಿಗೆ ತಲುಪಿಸಬೇಕು. ಬಳಿಕ 10 ದಿನದೊಳಗೆ ಸಂಘಟನೆಯ ಸಭೆ ಕರೆದು ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ಹಮ್ಮಿಕೊಂಡು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಧರಣಿ ನಡೆಸಲಾಗುತ್ತದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮುನಿರಾಜು ಮಾಹಿತಿ ನೀಡಿದರು.

‘ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ಸಂಸದರು ಮತ್ತು ಶಾಸಕರನ್ನು ಸಂಘದ ವೇದಿಕೆಯಲ್ಲಿ ಸಭೆ ಕರೆದು ಕ್ಷೇತ್ರವಾರು ದಲಿತರ ಕುಂದು -ಕೊರತೆಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಇತ್ಯರ್ಥಕ್ಕೆ ಒತ್ತಾಯಿಸಲಾಗುವುದು. ಪ್ರತಿ ತಿಂಗಳು ಸಂಘಟನೆಯ ಜಿಲ್ಲಾ ಮಟ್ಟದ ಸಭೆ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ಮೂಲ ಮಂತ್ರವಾಗಲಿ: ‘ದಲಿತರಿಗೆ ಸಿಗಬಹುದಾದ ಮೀಸಲಾತಿಯನ್ನು ಕಡ್ಡಾಯವಾಗಿ ಪಡೆದು ಸಮುದಾಯದವರು ಆರ್ಥಿಕವಾಗಿ ಬಲಿಷ್ಠರಾಗಬೇಕು. ದಲಿತ ಚಳವಳಿಯ ಪ್ರಗತಿಯು ಸಂಘಟನೆಯ ಮೂಲ ಮಂತ್ರವಾಗಬೇಕು. ದಲಿತ ಕಾರ್ಮಿಕರ ಹಕ್ಕು ಬಾಧ್ಯತೆಗಳ ಬಗ್ಗೆ ಚರ್ಚಿಸಬೇಕು’ ಎಂದು ಕಲಾವಿದ ಕೃಷ್ಣ ಸಲಹೆ ನೀಡಿದರು.

ದಲಿತ ಮುಖಂಡರಾದ ನಾರಾಯಣಸ್ವಾಮಿ, ಬಾಬು, ಮುನಿಅಂಜನಪ್ಪ, ದೇವರಾಜ್, ರವಿ, ಚೇತನ್, ವೆಂಕಟೇಶ್, ವಿಜಯ್‌ಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT