ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೋತ್ತರ ಸಮೀಕ್ಷೆ ಸಂಪೂರ್ಣ ಸತ್ಯವಲ್ಲ: ಕೆ.ಎಚ್‌.ಮುನಿಯಪ್ಪ

Last Updated 22 ಮೇ 2019, 14:29 IST
ಅಕ್ಷರ ಗಾತ್ರ

ಕೋಲಾರ: ‘ಚುನಾವಣೋತ್ತರ ಸಮೀಕ್ಷೆ ಸಂಪೂರ್ಣ ಸತ್ಯವಲ್ಲ. ಕಾಂಗ್ರೆಸ್‌ ಪಕ್ಷವು ದೇಶದಲ್ಲಿ 200 ಕ್ಷೇತ್ರಗಳಲ್ಲಿ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುತ್ತಾರೆ’ ಎಂದು ಕ್ಷೇತ್ರದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ಮತ ಎಣಿಕೆ ಕೇಂದ್ರದ ಏಜೆಂಟರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಆದರೆ, ಈ ಸಮೀಕ್ಷೆ ಹುಸಿಯಾಗಲಿದೆ’ ಎಂದರು.

‘ಬ್ಯಾಲೆಟ್ ಪೇಪರ್‌ ಮೂಲಕ ಮತದಾನ ನಡೆಸುವಂತೆ ವಿರೋಧ ಪಕ್ಷಗಳು ದೊಡ್ಡ ಮಟ್ಟದಲ್ಲಿ ಮನವಿ ಮಾಡಿದ್ದವು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಪಕ್ಷಗಳ ಮನವಿ ಲೆಕ್ಕಿಸದೆ ಇವಿಎಂಗಳ ಮೂಲಕ ಚುನಾವಣೆ ನಡೆಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜಸ್ತಾನದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಆದರೆ, ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 2 ಸ್ಥಾನದಲ್ಲಿ ಮಾತ್ರ ಜಯ ಗಳಿಸಲಿದೆ ಎಂದು ಹೇಳಲಾಗಿದೆ. ಇದಕ್ಕೆ ಅರ್ಥವಿದೆಯೇ? ಫಲಿತಾಂಶದಲ್ಲಿ ವ್ಯತ್ಯಾಸ ಮಾಡಲು ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಹೀಗಾಗಿ ಬ್ಯಾಲೆಟ್‌ ಪೇಪರ್‌ನಲ್ಲಿ ಮತದಾನ ನಡೆಸುವಂತೆ ಮನವಿ ಮಾಡಲಾಗಿತ್ತು. ಆದರೆ, ಮೋದಿಯವರು ಮನವಿಗೆ ಸ್ಪಂದಿಸದೆ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಇನ್ನು ಮುಂದೆ ದೇಶದಲ್ಲಿ ಮೋದಿ ಆಟ ನಡೆಯಲ್ಲ’ ಎಂದು ಕಿಡಿಕಾರಿದರು.

‘ಮತ ಖಾತ್ರಿ ಉಪಕರಣಗಳಲ್ಲಿನ (ವಿ.ವಿ ಪ್ಯಾಟ್‌) ಶೇ 50ರಷ್ಟು ಮತ ಚೀಟಿಗಳ ಎಣಿಕೆಗೆ ಅವಕಾಶ ನೀಡಿದ್ದರೆ ಗೊಂದಲ ಬಗೆಹರಿಯುತ್ತಿತ್ತು. ಬ್ಯಾಲೆಟ್ ಪೇಪರ್‌ ಬಳಸುತ್ತಿದ್ದ ಕಾಲದಲ್ಲೇ 5 ತಾಸಿನೊಳಗೆ ಮತ ಎಣಿಕೆ ಪ್ರಕ್ರಿಯೆ ಮುಗಿಯುತ್ತಿತ್ತು. ಈಗ ಇವಿಎಂಗಳಿವೆ. ವಿ.ವಿ ಪ್ಯಾಟ್‌ನ ಮತ ಚೀಟಿಗಳ ಎಣಿಕೆಗೆ ಅವಕಾಶ ನೀಡಿದರೆ ಏನು ಕಷ್ಟವಾಗುತ್ತದೆ?’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT