ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೇಂದ್ರದಲ್ಲಿ ಸಿದ್ಧತೆ ಪರಿಶೀಲನೆ

ಶೇ 95ರಷ್ಟು ಸಿದ್ಧತೆ ಪೂರ್ಣ: ಬಿಇಒ ನಾಗರಾಜಗೌಡ ಹೇಳಿಕೆ
Last Updated 23 ಜೂನ್ 2020, 15:14 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಭೀತಿ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ನೇತೃತ್ವದ ತಂಡವು ಜಿಲ್ಲಾ ಕೇಂದ್ರದ ಹಾಗೂ ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿತು.

‘ಪರೀಕ್ಷಾ ಕೇಂದ್ರಗಳಲ್ಲಿ ಶೇ 95ರಷ್ಟು ಸಿದ್ಧತೆ ಪೂರ್ಣಗೊಂಡಿದೆ. ಕೇಂದ್ರಗಳ ಆವರಣ ಹಾಗೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದಂತೆ ಪ್ರವೇಶ ಭಾಗದಲ್ಲಿ ಸ್ಯಾನಿಟೈಸರ್ ನೀಡಬೇಕು. ಕೇಂದ್ರದ ಆವರಣದಲ್ಲಿ ಮಕ್ಕಳು ಗುಂಪುಗೂಡದಂತೆ ಎಚ್ಚರ ವಹಿಸಬೇಕು’ ಎಂದು ಬಿಇಒ ನಾಗರಾಜಗೌಡ ಸೂಚಿಸಿದರು.

‘ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಕೇಂದ್ರದ ಪ್ರವೇಶ ಭಾಗದಲ್ಲಿ ಹಾಜರಿದ್ದು, ಮಕ್ಕಳ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಒಳ ಬಿಡಬೇಕು. ಮಕ್ಕಳಿಗೆ ನೀಡಲಾಗುವ ಮಾಸ್ಕ್‌ಗಳನ್ನು ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗಿದ್ದು, ಪ್ರತಿ ವಿದ್ಯಾರ್ಥಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೇಂದ್ರದೊಳಗೆ ಬರುವಂತೆ ನೋಡಿಕೊಳ್ಳಿ’ ಎಂದು ಹೇಳಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಸುರಕ್ಷತಾ ಮಾರ್ಗಸೂಚಿ ಅನುಸರಿಸಿ ನಡೆಸಿರುವ ಅಣಕು ಪರೀಕ್ಷೆ ಮಾದರಿಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಮಕ್ಕಳು ಆಗಮನ ಮತ್ತು ನಿರ್ಗಮನ ಕಾರ್ಯ ನಡೆಯಬೇಕು. ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು.

‘ಕೇಂದ್ರಕ್ಕೆ ಬರುವಾಗ ಮಕ್ಕಳು ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮಾರ್ಕಿಂಗ್‌ ಮಾಡಬೇಕು. ಮಕ್ಕಳ ಜತೆ ಬರುವ ಪೋಷಕರು ಕೇಂದ್ರದ ಆವರಣ ಪ್ರವೇಶ ಮಾಡುವಂತಿಲ್ಲ. ಮಕ್ಕಳು ಮಾತ್ರ ನೇರವಾಗಿ ಕೊಠಡಿಯನ್ನು ಪ್ರವೇಶಿಸಬೇಕು’ ಎಂದು ಸೂಚನೆ ನೀಡಿದರು.

ಕಾಳಜಿ ವಹಿಸಿ: ‘ಮಕ್ಕಳು ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕೆ ಹಾಕಿರುವ ಬಾಕ್ಸ್‌ಗಳಲ್ಲೇ ನಿಂತು ಮುಂದೆ ಸಾಗಬೇಕು. ಆಶಾ ಕಾರ್ಯಕರ್ತೆಯರು, ಸ್ಕೌಟ್ ಮತ್ತು ಗೈಡ್ಸ್ ಸದಸ್ಯರು, ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಕಿವಿಮಾತು ಹೇಳಿದರು.

‘ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಾಕ್ಸ್‌ಗಳನ್ನು ಹಾಕಿರಬೇಕು. ಮಕ್ಕಳು ಭಯವಿಲ್ಲದೆ ಪರೀಕ್ಷೆ ಬರೆಯುವ ವಿಶ್ವಾಸ ಮೂಡಿಸಬೇಕು. ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಬಸ್‌ ಸೇವೆ ಕಲ್ಪಿಸಬೇಕು. ಸಣ್ಣಪುಟ್ಟ ಲೋಪಕ್ಕೂ ಅವಕಾಶ ನೀಡಬಾರದು’ ಎಂದು ತಿಳಿಸಿದರು.

ಬಿಆರ್‌ಪಿಗಳಾದ ಸವಿತಾ, ಪ್ರವೀಣ್, ಗೋಪಾಲಕೃಷ್ಣ, ನಾಗರಾಜ್, ಇಸಿಒ ಬೈರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT