ಭಾನುವಾರ, ಅಕ್ಟೋಬರ್ 25, 2020
28 °C

ಕೋಲಾರ: ಮಾನವೀಯತೆ ಮರೆತ ಖಾಸಗಿ ಆಸ್ಪತ್ರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜನರು ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಮತ್ತು ವೈದ್ಯರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಕಳವಳ ವ್ಯಕ್ತಪಡಿಸಿದರು.

ಸಾಹಿತಿ ಕುಂತೂರು ಚಂದ್ರಪ್ಪ ಸ್ಮರಣಾರ್ಥ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇಲ್ಲಿ ಶನಿವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಹಲವು ಸಾಹಿತಿಗಳು ಮೃತಪಟ್ಟಿದ್ದಾರೆ. ಸಾಹಿತಿಗಳು ಮತ್ತು ಜನಸಾಮಾನ್ಯರು ಕೊರೊನಾ ಬಗ್ಗೆ ಜಾಗೃತರಾಗಬೇಕು’ ಎಂದು ಹೇಳಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯರಲ್ಲಿ ಮಾನವೀಯತೆ ಮರೆಯಾಗಿದೆ. ಹಣ ಸಂಪಾದನೆಯ ಹಿಂದೆ ಬಿದ್ದಿರುವ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿನ ಚಿಕಿತ್ಸೆಗೆ ಬಡ ಜನರಿಂದ ದುಪ್ಪಟ್ಟು ಶುಲ್ಕ ಪಡೆಯುತ್ತಿವೆ. ವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ದಾರಿದ್ರ್ಯದ ನಡುವೆ ನಮ್ಮ ನಡವಳಿಕೆ ಸತ್ಯ ನ್ಯಾಯದ ಮೂಲಕ ನಡೆಯಬೇಕು’ ಎಂದರು.

‘ಸರಳ ವ್ಯಕ್ತಿತ್ವದ ಕುಂತೂರು ಚಂದ್ರಪ್ಪ ಅವರ ಸಾವು ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕವಿತೆಗಳು ಮತ್ತು ಲೇಖನಗಳನ್ನು ಕ್ರೋಢೀಕರಿಸಿ ಕೃತಿಯ ಮೂಲಕ ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅದ್ಯಕ್ಷ ಪಿ.ನಾರಾಯಾಣಪ್ಪ ತಿಳಿಸಿದರು.

‘ಚಂದ್ರಪ್ಪ ಅವರು ನುಡಿದಂತೆ ನಡೆದವರು. ಚುಟುಕುಗಳನ್ನು ಬರೆದು ಪ್ರಸಿದ್ಧಿಯಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಬಣ್ಣಿಸಿದರು.

ಸಾಹಿತಿಗಳಾದ ಶರಣಪ್ಪ ಗಬ್ಬೂರು, ಸಿ.ರವೀಂದ್ರಸಿಂಗ್‌, ಎಸ್.ಸಿ ವೆಂಕಟಕೃಷ್ಣಪ್ಪ, ಟಿ.ಎಂ.ನಾಗರಾಜ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.