ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲವಟ್ಟ ಗ್ರಾಮದಲ್ಲಿ ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

Last Updated 22 ಜನವರಿ 2023, 5:18 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆ ಹೊತ್ತುಕೊಂಡು ತಾಲ್ಲೂಕು ಕೇಂದ್ರದ ಕಚೇರಿಗಳಿಗೆ ಅಲೆಯುವ ಕಷ್ಟದಿಂದ ಪಾರಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಹೇಳಿದರು.

ತಾಲ್ಲೂಕಿನ ಆಲವಟ್ಟ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ತಾಲ್ಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರು, ಆಯಾ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

ಪ್ರತಿ ತಿಂಗಳು ಮೂರನೇ ಶನಿವಾರ ಪ್ರತಿ ತಾಲ್ಲೂಕಿನ ಒಂದು ಗ್ರಾಮದಲ್ಲಿ ಅಧಿಕಾರಿಗಳು ವಾಸ್ತವ್ಯ ಹೂಡುತ್ತಾರೆ. ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮಕ್ಕೆ ಒಂದು ವಾರ ಮೊದಲು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಪರಿಹಾರ ಸೂಚಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಈಗಾಗಲೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದರು.

ಯಾವುದೇ ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ನೀಡುವುದು ಸಾಧ್ಯವಾಗದಿದ್ದಲ್ಲಿ, ನಿಗದಿತ ಕಾಲಾವಧಿಯಲ್ಲಿ ಪರಿಹಾರ ನೀಡಲಾಗುವುದು. ಗ್ರಾಮಸ್ಥರು ನೀಡುವ ಅರ್ಜಿ ಮೇಲೆ ತಪ್ಪದೆ ಮೊಬೈಲ್ ಸಂಖ್ಯೆ ನಮೂದಿಸಬೇಕು. ಹಾಗೆ ಮಾಡುವುದರಿಂದ ಸಮಸ್ಯೆ ನಿವಾರಣೆ ಸಂದರ್ಭದಲ್ಲಿ ಅಗತ್ಯವೆನಿಸಿದರೆ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯ ವಿತರಿಸಲಾಗುವುದು. ಸೌಲಭ್ಯ ವಂಚಿತರಿದ್ದಲ್ಲಿ ಗುರುತಿಸಿ ಅನುಕೂಲ ಮಾಡಿಕೊಡಲಾಗುವುದು. ಆದ್ದರಿಂದ ಗ್ರಾಮಸ್ಥರು ಲಘುವಾಗಿ ಎಂದು ಹೇಳಿದರು.

ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಗ್ರಾಮದ ಹೊರವಲಯದಲ್ಲಿ 5 ಸ್ಮಶಾನಗಳಿದ್ದು, ಒಂದು ಸ್ಮಶಾನದ ಒತ್ತುವರಿ ತೆರವುಗೊಳಿಸಲಾಗಿದೆ. ಸರ್ಕಾರಿ ಪ್ರೌಢಶಾಲೆ ಇರುವ ಸ್ಥಳವನ್ನು ಶಾಲೆ ಹೆಸರಿಗೆ ಮಾಡಿಕೊಡಲಾಗುವುದು. ಗ್ರಾಮದ ಕೆರೆ ಕಟ್ಟೆ ದುರಸ್ತಿ ಮಾಡಿಸಲು ಕೋರಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ ಎಂದು ಹೇಳಿದರು.

ಶನಿವಾರ ಬೆಳಿಗ್ಗೆ ಪಶುಪಾಲನಾ ಇಲಾಖೆ ವತಿಯಿಂದ 852 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಅರ್ಹ ಫಲಾನುಭವಿಗಳಿಗೆ ಮಾಶಾಸನ ಹಾಗೂ ಜಾತಿ ಪ್ರಮಾಣ ಪತ್ರ ನೀಡಲಾಗುವುದು. ಭೂಮಾಪನ ಮತ್ತಿತರ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ಫಲಾನುಭವಿಗಳಿಗೆ ವಿವಿಧ ಪಿಂಚಣಿ ಹಾಗೂ ಜಾತಿ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರೊಬೆಷನರಿ ಜಿಲ್ಲಾಧಿಕಾರಿ ವಿನಾಯಕ್ ನರ್ಹಡೆ, ಗ್ರೇಡ್ 2 ತಹಶೀಲ್ದಾರ್ ಜಯರಾಂ, ಶಿರಸ್ತೇದಾರ್‌ ಆರ್.ಮನೋಹರ ಮಾನೆ, ಜಿ.ಎಂ.ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಬಿಇಒ ವಿ. ಉಮಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷ ನಾಗೇಶ್ರೆಡ್ಡಿ, ಕೆ.ನಾರಾಯಣಸ್ವಾಮಿ, ರೋಜಾ ಭಾರತಮ್ಮ, ಮಂಜುನಾಥರೆಡ್ಡಿ, ವಿ.ವೆಂಕಟರೆಡ್ಡಿ, ಎನ್.ಚೌಡರೆಡ್ಡಿ, ಟಿ.ನಾರಾಯಣಸ್ವಾಮಿ, ಸುಧಾ, ಎಂ.ಶ್ರೀನಿವಾಸನ್, ರಘು, ಕೃಷ್ಣಪ್ಪ, ಈಶ್ವರ್, ಡಾ.ಮಂಜುನಾಥ ರೆಡ್ಡಿ, ಡಾ.ಮಂಜು, ಡಾ. ವಿಶ್ವನಾಥರೆಡ್ಡಿ, ಎ.ಇ.ನಾರಾಯಣಸ್ವಾಮಿ, ಮುದ್ದಣ್ಣ, ನವೀನ್ ಕುಮಾರ್, ನಾರಾಯಣಸ್ವಾಮಿ, ಎನ್.ಶ್ರೀನಿವಾಸಯ್ಯ, ಮುನೆಯ್ಯ, ಶಿವಕುಮಾರ್, ನಂಜುಂಡೇಶ್ವರ, ಗುರುರಾಜ ರಾವ್, ತಿಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT