ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಿರುದ್ಯೋಗಿಗಳಿಂದ ಅಪಪ್ರಚಾರ

ವಿರೋಧಿಗಳ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಪ್ಪ ವಾಗ್ದಾಳಿ
Last Updated 10 ಏಪ್ರಿಲ್ 2019, 17:05 IST
ಅಕ್ಷರ ಗಾತ್ರ

ಕೋಲಾರ: ‘ಚುನಾವಣೆ ಸಂದರ್ಭದಲ್ಲಿ ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡುವುದು ಸಹಜ, ಇದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಿವಿಗೊಡಬಾರದು’ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಮೂಲೆ ಗುಂಪಾಗಿರುವ ರಾಜಕೀಯ ನಿರುದ್ಯೋಗಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಗಾಳಿ ಮಾತು ನಂಬಬೇಡಿ’ ಎಂದು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘7 ಬಾರಿ ನನ್ನ ಇತಿಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿಯೇ ಈಗ ಮತ್ತೆ ಮತ ಕೇಳುತ್ತಿದ್ದೇನೆ. ಏನಾದರೂ ಸಮಸ್ಯೆ ಇದ್ದರೆ ನನಗೆ ಹೇಳಿ. ಸಮಸ್ಯೆ ಬಗೆಹರಿಸುತ್ತೇನೆ. ಅದು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಶೋಭೆಯಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಮೈಸೂರು, ಚಾಮರಾಜನಗರ, ತುಮಕೂರು, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಿನಿಂದ ಎರಡೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಕೋಮುವಾದಿಗಳ ಶಕ್ತಿ ಕುಗ್ಗಿಸಲು ಜಾತ್ಯತೀತ ಪಕ್ಷಗಳು ಒಗ್ಗೂಡಿವೆ’ ಎಂದು ಹೇಳಿದರು.

‘ದೇಶದಲ್ಲಿ ಶಾಂತಿ ಕಾಪಾಡಲು ಬಿಜೆಪಿ ಕೈಯಲ್ಲಾಗಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಕೋಮುಗಲಭೆ ಪ್ರಕರಣಗಳು ಹೆಚ್ಚಿವೆ. ರೈತರ, ಬಡವರ ಸಾಲ ಮನ್ನಾ ಮಾಡದ ಪ್ರಧಾನಿ ಮೋದಿ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಾರೆ. ಮೋದಿಗೆ ರೈತ ಪರ ಕಾಳಜಿಯಿಲ್ಲ’ ಎಂದು ಟೀಕಿಸಿದರು.

ಮೋದಿ ಸ್ಪಂದಿಸಲಿಲ್ಲ:‘ಈ ಹಿಂದೆ ಯುಪಿಎ ಸರ್ಕಾರ ₹ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿತು. ರಾಜ್ಯದ ಮೈತ್ರಿ ಸರ್ಕಾರ ಸಾಲ ಮನ್ನಾಕ್ಕೆ ಮನವಿ ಮಾಡಿದಾಗ ಮೋದಿ ಸ್ಪಂದಿಸಲಿಲ್ಲ. ಈಗ ಅವರು ಮಾಡಿರುವ ಸಾಲ ಮನ್ನಾದಲ್ಲಿ ಕೇವಲ ಬಿಜೆಪಿಯವರ ಅರ್ಜಿಗಳು ಮಾತ್ರ ಇವೆ. ಸಾಮಾನ್ಯ ರೈತರ ಅರ್ಜಿಗಳಿಲ್ಲ’ ಎಂದು ದೂರಿದರು.

‘7 ಬಾರಿ ಕ್ಷೇತ್ರದ ಜನರ ಆಶೀರ್ವಾದ ಸಿಕ್ಕ ಕಾರಣದಿಂದಲೇ ರಸ್ತೆ, ರೈಲ್ವೆ ಮಾರ್ಗ ಅನುಷ್ಠಾನಗೊಂಡಿದೆ. ತಾಲ್ಲೂಕಿನ ವೇಮಗಲ್, ನರಸಾಪುರ ಭಾಗಕ್ಕೆ ಕೈಗಾರಿಕೆಗಳು ಬಂದಿವೆ. 50 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸಿಕ್ಕಿದೆ. ಸದ್ಯದಲ್ಲೇ ಆ್ಯಪಲ್‌ ಮೊಬೈಲ್‌ ಕಂಪನಿ ಘಟಕ ಕಾರ್ಯಾರಂಭ ಮಾಡಲಿದ್ದು, 10 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ನಿರುದ್ಯೋಗ ಹೆಚ್ಚಿತು: ‘ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ವರ್ಷಕ್ಕೆ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಉದ್ಯೋಗಾವಕಾಶ ಸೃಷ್ಟಿಯಾಗುವ ಬದಲು ನಿರುದ್ಯೋಗ ಹೆಚ್ಚಿತು. ಕೋಟು ಹಾಕಿಕೊಂಡು ವಿದೇಶ ಪ್ರವಾಸ ಮಾಡಿದ್ದೇ ಮೋದಿಯವರ ದೊಡ್ಡ ಸಾಧನೆ’ ಎಂದು ವ್ಯಂಗ್ಯವಾಡಿದರು.

ಪ್ರಚೋದಿಸುತ್ತಿದ್ದಾರೆ: ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಕಾಂಗ್ರೆಸ್ ಹಾಕಿದ ಭದ್ರ ಬುನಾದಿಯಿಂದ ದೇಶವು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಬಿಜೆಪಿ ಮುಖಂಡರು ಅಭಿವೃದ್ಧಿ ಬಗ್ಗೆ ಮಾತನಾಡದೆ ರಾಮಮಂದಿರ, ಕಾಶ್ಮೀರದ ವಿಚಾರ ಪ್ರಸ್ತಾಪಿಸುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಮುಳಬಾಗಿಲು ಕ್ಷೇತ್ರದ ಉಸ್ತುವಾರಿ ವಸಂತ ಕವಿತಾ ಟೀಕಿಸಿದರು.

‘ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು. ಯಾರಿಗಾದರೂ ಮತ ಹಾಕಿ, ಒಟ್ಟಿನಲ್ಲಿ ಹಕ್ಕು ಚಲಾಯಿಸುವುದು ಮರೆಯಬೇಡಿ’ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಮಂಜುನಾಥ್, ಜಿಲ್ಲಾ ಘಟಕದ ಉಪಾಧ್ಯಕ್ಷ ಮುರಳಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವೇಮಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT