ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಇಒ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಅನುಷ್ಠಾನಗೊಳ್ಳದ ಯೋಜನೆಗಳು
Last Updated 10 ನವೆಂಬರ್ 2020, 13:56 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್‌ ತೀವ್ರ ತರಾಟೆಗೆ ತೆಗೆದುಕೊಂಡರು.

ಇಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ತಡಬಡಾಯಿಸಿದರು. ಇದರಿಂದ ಆಕ್ರೋಶಗೊಂಡ ಸಿಇಒ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಆಗ ಮಧ್ಯಪ್ರವೇಶಿಸಿದ ಇಲಾಖೆ ಉಪ ನಿರ್ದೇಶಕಿ ಪಾಲಿ ಅವರು ಇಲಾಖೆಯ ಕಾರ್ಯವೈಖರಿ ಸಮರ್ಥಿಸಿಕೊಳ್ಳಲು ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ಸಿಇಒ, ‘ಅಧಿಕಾರಿಗಳನ್ನು ಅಮಾನತು ಮಾಡಿದರೆ ಬುದ್ಧಿ ಬರುತ್ತದೆ’ ಎಂದು ಗುಡುಗಿದರು.

‘ಜಿಲ್ಲೆಯಲ್ಲಿ ಖಾಸಗಿ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಆಯಾ ಗ್ರಾಮದ ಸರ್ಕಾರಿ ಶಾಲೆಗಳಲ್ಲಿನ ಹೆಚ್ಚುವರಿ ಕಟ್ಟಡ ಅಥವಾ ಸಮುದಾಯ ಭವನಕ್ಕೆ ಸ್ಥಳಾಂತರಿಸಬೇಕು. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಶೀಘ್ರವೇ ಕ್ರಿಯಾ ಯೋಜನೆ ರೂಪಿಸಿ’ ಎಂದು ಸಿಇಒ ಅಧಿಕಾರಿಗಳಿಗೆ ಆದೇಶಿಸಿದರು.

‘ಇಲಾಖೆಯಲ್ಲಿ ವಿವಿಧ 89 ಹುದ್ದೆ, 64 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 143 ಸಹಾಯಕಿಯರ ಹುದ್ದೆಗಳು ಖಾಲಿಯಿವೆ. ಮೇಲ್ವಿಚಾರಕರ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿಯಿವೆ. ಇದರಿಂದ ಇಲಾಖೆಯ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ ಮತ್ತು ಯೋಜನೆಗಳ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ’ ಎಂದು ಪಾಲಿ ಹೇಳಿದರು.

ಆಗ ಸಿಇಒ, ‘ಹುದ್ದೆಗಳು ಖಾಲಿ ಇರುವುದರಿಂದ ಉದ್ದೇಶಿತ ಗುರಿ ಸಾಧನೆಯಾಗಿಲ್ಲ ಎಂದು ಸಬೂಬು ಹೇಳಬೇಡಿ. ಅಧಿಕಾರಿಗಳಲ್ಲಿ ಕೆಲಸ ಮಾಡುವ ಕಾಳಜಿ ಮತ್ತು ಬದ್ಧತೆಯಿರಬೇಕು’ ಎಂದು ಕೆಂಡಾಮಂಡಲರಾದರು.

ದೂರು ಬಂದಿವೆ: ‘ಲಾಕ್‌ಡೌನ್‌ ಅವಧಿಯಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಪದಾರ್ಥ ವಿತರಿಸಿಲ್ಲ ಎಂದು ಸಾಕಷ್ಟು ದೂರು ಬಂದಿವೆ. ಮಕ್ಕಳಿಗೆ ಮತ್ತು ಬಾಣಂತಿಯರ ಮನೆಗೆ ಆಹಾರ ಪದಾರ್ಥಗಳನ್ನು ಪ್ಯಾಕೆಟ್ ಮಾಡಿ ಕಳುಹಿಸಬೇಕಿತ್ತು. ವಿತರಣೆ ಮಾಡಿರುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದೆ. ಏಜೆನ್ಸಿಯಿಂದ ಆಹಾರ ಪದಾರ್ಥಗಳು ಬಂದಾಗ ಗುಣಮಟ್ಟ ಪರಿಶೀಲಿಸುವುದಿಲ್ಲವೇ. ಶಿಶು ಅಭಿವೃದ್ಧಿ ಅಧಿಕಾರಿಗಳು (ಸಿಡಿಪಿಒ) ಏನು ಕೆಲಸ ಮಾಡುತ್ತಾರೆ?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ರವಿ, ‘ಆಹಾರ ಪದಾರ್ಥಗಳ ಪರಿಶೀಲನೆಗೆ ಕಚೇರಿಯ ಕೆಳ ಹಂತದ ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ’ ಎಂದರು. ಇದಕ್ಕೆ ಆಕ್ರೋಶಗೊಂಡ ಸಿಇಒ, ‘ವರ್ಷದಲ್ಲಿ 4 ಬಾರಿ ಗೋದಾಮುಗಳಿಗೆ ಆಹಾರ ಪದಾರ್ಥ ಬರುತ್ತವೆ. ಖುದ್ದು ಗೋದಾಮಿಗೆ ಹೋಗಿ ಪರಿಶೀಲನೆ ಮಾಡಿ ಆಹಾರ ಪದಾರ್ಥ ಸ್ವೀಕರಿಸಬೇಕೆಂಬ ಅರಿವಿಲ್ಲವೆ? ನಿಮಗೆಲ್ಲ ನಾಚಿಕೆಯಾಗಬೇಕು’ ಎಂದು ಹರಿಹಾಯ್ದರು.

ಅವ್ಯವಹಾರ ಗೊತ್ತಿದೆ: ‘ಇಲಾಖೆ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗಬೇಕು. ನೆಪ ಮಾತ್ರಕ್ಕೆ ಸಭೆ ನಡೆಸುತ್ತಿಲ್ಲ. ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಿ. ಮನೆಗಳಿಗೆ ಆಹಾರ ಪದಾರ್ಥ ಖರೀದಿಸುವಾಗ ಹಲವು ಬಾರಿ ಪರಿಶೀಲಿಸುತ್ತೀರಿ. ಅಂಗನವಾಡಿಗಳನ್ನು ಸ್ವಂತ ಮನೆಗಳೆಂದು ಭಾವಿಸಿ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

‘ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಕೇಂದ್ರಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕು. ಆಯ್ಧ ಅಂಗನವಾಡಿಗಳ ಬಳಿ ಕೈತೋಟ ನಿರ್ಮಿಸಬೇಕು’ ಎಂದು ಸೂಚಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ಭರ್ತಿಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಶೀಘ್ರವೇ ಅರ್ಜಿ ಆಹ್ವಾನಿಸಬೇಕು. ಮುಂದಿನ ವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಆ ನಂತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಅವಕಾಶವಿಲ್ಲ. ಇಲಾಖೆಯಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರ ಗೊತ್ತಿದೆ. ಮುಂದೆ ಅಕ್ರಮಕ್ಕೆ ಅವಕಾಶ ನೀಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT