ಶುಕ್ರವಾರ, ಆಗಸ್ಟ್ 23, 2019
22 °C

ಅಡಮಾನ ಸಾಲ ಪಾವತಿಸದಿದ್ದರೆ ಆಸ್ತಿ ಹರಾಜು : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್ಚರಿಕೆ

Published:
Updated:
Prajavani

ಕೋಲಾರ: ‘ನಿವೇಶನ ಮತ್ತು ವಸತಿ ಅಡಮಾನ ಸಾಲವನ್ನು ಗ್ರಾಹಕರು ಸಕಾಲದಲ್ಲಿ ಪಾವತಿ ಮಾಡದಿದ್ದರೆ ಕಾನೂನು ರೀತಿ ಆಸ್ತಿ ಹರಾಜು ಮಾಡಲಾಗುವುದು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಎಂ.ಗೋವಿಂಡಗೌಡ ಎಚ್ಚರಿಕೆ ನೀಡಿದರು.

ಡಿಸಿಸಿ ಬ್ಯಾಂಕಿಗೆ ಅಡಮಾನ ಸಾಲ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳ ಮನೆಗೆ ಭಾನುವಾರ ಭೇಟಿ ನೀಡಿ ಸಾಲ ಮರುಪಾವತಿಸುವಂತೆ ಸೂಚಿಸಿ ಮಾತನಾಡಿ, ‘ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲವನ್ನು ಪ್ರಮಾಣಿಕವಾಗಿ ಮರುಪಾವತಿ ಮಾಡಬೇಕಾದ ಜವಾಬ್ದಾರಿ ಗ್ರಾಹಕರ ಮೇಲಿದೆ’ ಎಂದರು.

‘ಸಾಲ ಪಡೆದುಕೊಳ್ಳಲು ಸಾಕಷ್ಟು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಂಜೂರು ಮಾಡಿಸಿಕೊಳ್ಳುತ್ತೀರಾ, ಅಷ್ಟೇ ಪ್ರಮಾಣಿಕವಾಗಿ ಮರುಪಾವತಿ ಮಾಡಬೇಕು ಎಂಬ ಜವಾಬ್ದಾರಿಯಿಲ್ಲವೇ, ಬಡ ಮಹಿಳೆಯರಲ್ಲಿ, ರೈತರಲ್ಲಿ ಇರುವ ಪ್ರಮಾಣಿಕತೆ ನಿಮಗಿಲ್ಲವೇ’ ಎಂದು ಪ್ರಶ್ನಿಸಿದರು.

‘35ಕ್ಕೂ ಹೆಚ್ಚು ಮಂದಿ ಅಡ ಮಾನ ಸಾಲದ ಕಂತುಗಳನ್ನು ಪಾವತಿ ಮಾಡುತ್ತಿಲ್ಲ. ಅಧಿಕಾರಿಗಳು ಸಾಲ ಕೇಳಲು ಮನೆ ಬಳಿಗೆ ಬರಲು ನಿಮ್ಮ ವರ್ತನೆಗೆ ಬೇಸತ್ತಿದ್ದಾರೆ. ನಿಮಗೆ ಇರುವ ಆರ್ಥಿಕ ಅದಾಯದ ಆಧಾರದ ಮೇಲೆ ಅಡಮಾನ ಸಾಲ ನೀಡಲಾಗಿದೆ. ಪ್ರತಿ ತಿಂಗಳು ಕಂತು ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದ್ದರೂ ಏನು ಸಮಸ್ಯೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿದ್ದರೆ ಸುಮ್ಮನೆ ಬಿಡುತ್ತಿರಲಿಲ್ಲ, ಮನೆ ಮುಂದೆ ಡಂಗೋರ ಸಾರಿ ಅವಮಾನ ಮಾಡುತ್ತಿದ್ದರು, ಅವರ ರೀತಿ ನಾವು ಮಾಡಕ್ಕೆ ಹೋಗಲ್ಲ. ಕಂತು ಮೂಲಕ ಪಾವತಿ ಮಾಡುವ ಮೂಲಕ ಬೇರೆಯವರಿಗೆ ಸಾಲ ವಿತರಿಸಲು ಅವಕಾಶ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

‘ಸಾಲ ಮರು ಪಾವತಿ ಮಾಡದಿದ್ದರೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕೆ ಯಾರ ಮುಲಾಜಿಗೂ ಒಣಗಾಗದೆ ಕ್ರಮಕೈಗೊಳ್ಳಲಾಗುವುದು. ಇದರಿಂದ ಅಡಮಾನ ಇಟ್ಟಿರುವ ನಿವೇಶನ ಅಥವಾ ವಸತಿ ಕಡೆದುಕೊಳ್ಳಬೇಕಾಗುತ್ತದೆ. ಇದನ್ನು ಅರಿತು ಮರುಪಾವತಿ ಮಾಡಬೇಕು’ ಎಂದು ಸೂಚಿಸಿದರು.

ನಗರದ ಕಾಠರಿಪಾಳ್ಯದ ಪುಷ್ಪಮ್ಮ ಮಗನಪರವಾಗಿ ₨ 50 ಸಾವಿರ ಸಾಲ ಮರುಪಾವತಿ ಮಾಡಿ ಮಾತನಾಡಿ, ‘ಕಷ್ಟಕ್ಕೆ ಪಡೆದುಕೊಂಡಿರುವ ಸಾಲ ಮರುಪಾವತಿ ಮಾಡಿದ್ದರೆ ಸಮಸ್ಯೆಗಳು ಹೆಚ್ಚಾಗುತ್ತಿರುತ್ತವೆ. ಎಲ್ಲಿ ಸಾಲ ಮಾಡಿದರೂ ಪಾವತಿ ಮಾಡಬೇಕಾದ ಜವಾಬ್ದಾರಿ ಇದೆ. ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದುಕೊಂಡು ತಡವಾಗಿ ಕೊಟ್ಟರು ಪುನಃ ಅವರಿಂದ ಸಾಲ ದೊರೆಯುವುದಿಲ್ಲ, ಬ್ಯಾಂಕ್‌ ಪದ್ದತಿಯೂ ಅಷ್ಟೇ’ ಎಂದರು.

‘ಪಡೆದುಕೊಂಡ ಸಾಲ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದರೆ ಮರು ಪಾವತಿ ಮಾಡಲು ಸುಲಭವಾಗುತ್ತದೆ. ಉಳಿದ ಬಾಕಿ ಮೊತ್ತವನ್ನು ಮಂಗಳವಾರದೊಳಗೆ ಪಾವತಿ ಮಾಡಿಸುವುದಾಗಿ’ ಎಂದು ಭರವಸೆ ನೀಡಿದರು.

ನಗರದ ಸಿ.ಬೈರೇಗೌಡ ನಗರ, ಕೀಲುಕೋಟೆ, ಮುನೇಶ್ವರ ನಗರ, ಕಾಠರೀಪಾಳ್ಯ, ಕಾರಂಜಿಕಟ್ಟೆ, ಕುರುಬರಪೇಟೆ ಬಡಾವಣೆಗಳಿಗೆ ಭೇಟಿ ನೀಡಿ ಸಾಲ ವಸೂಲಿ ಮಾಡಿದರು.

ಬ್ಯಾಂಕಿನ ಸಿಬ್ಬಂದಿ ಅಮಿನಾ, ಪ್ರಶಾಂತ್ ಇದ್ದರು.

Post Comments (+)