ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಖಂಡಿಸಿ 11 ದಲಿತ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

Last Updated 21 ಸೆಪ್ಟೆಂಬರ್ 2021, 4:43 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಜಿಲ್ಲೆಯಲ್ಲಿ ತಲೆಯೆತ್ತಿರುವ ಗೂಂಡಾ ಸಂಸ್ಕೃತಿಯನ್ನು ಸಾಂಘಿಕ ಹೋರಾಟದ ಮೂಲಕ ಮಟ್ಟಹಾಕಬೇಕು. ಮನುವಾದಿಗಳಿಂದ ದೇಶವನ್ನು ರಕ್ಷಿಸಬೇಕು ಎಂದು ರಾಜ್ಯ ದಲಿತ ಮುಖಂಡ ಎನ್.ಮುನಿಸ್ವಾಮಿ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ, ಈಚೆಗೆ ತಾಡಿಗೋಳ್ ಗ್ರಾಮದ ಸಮೀಪ ವಿದ್ಯಾರ್ಥಿನಿಯರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ನಡೆದ ಕಾಲ್ನಡಿಗೆ ಜಾಥಾದ ನಂತರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಆದರೆ ಮನುಧರ್ಮಶಾಸ್ತ್ರ ಮಹಿಳೆಯರು ಸ್ವತಂತ್ರಕ್ಕೆ ಅರ್ಹರಲ್ಲ ಎಂದು ಹೇಳುತ್ತದೆ ಎಂದು ಹೇಳಿದರು.

ಹೆಣ್ಣು ಮಕ್ಕಳನ್ನು ಚುಡಾಯಿಸಿದ ವ್ಯಕ್ತಿಗಳಿಗೆ ಬುದ್ಧಿ ಹೇಳಿದ ಪೋಷಕರ ಮೇಲೆ ಹಲ್ಲೆ ನಡೆಸಲಾಗಿದೆ. ಚುಡಾಯಿಸಿದ ಬಗ್ಗೆ ಪೋಷಕರಿಗೆ ಹೇಳಿದ ವಿದ್ಯಾರ್ಥಿನಿಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಹಕ್ಕು ಹಾಗೂ ಅವಕಾಶ ನೀಡಿದ್ದಾರೆ. ಅದನ್ನು ಕಸಿದುಕೊಳ್ಳುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ಪೊಲೀಸರು ಪ್ರಾರಂಭದಲ್ಲಿ ಎಡವಟ್ಟು ಮಾಡಿದ್ದರೂ, ಅನಂತರ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಅವರು ಅಭಿನಂದನಾರ್ಹರು. ಆದರೆ ತಾಡಿಗೋಳ್ ದೌರ್ಜನ್ಯ ಘಟನೆಯಲ್ಲಿ ನಿರಪರಾಧಿಗಳ ಮೇಲೆ ಹಾಕಿರುವ ಮೊಕದ್ದಮೆ ವಾಪಸ್ ಪಡೆಯಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು
ಎಂದು ಹೇಳಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಕೊಲಾರ ಜಿಲ್ಲೆ ಚಳವಳಿಗಳ ಅಗ್ನಿಕುಂಡ. ಯಾವುದೇಸಮುದಾಯಕ್ಕೆ ಅನ್ಯಾಯವಾದರೂ ಸಹಿಸುವುದಿಲ್ಲ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಆದರೆ ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕೃತ ಸಂಸ್ಥೆಗಳು ನೀಡಿರುವ ಮಾಹಿತಿಯಂತೆ, ದೇಶದಲ್ಲಿ ಮೂರು ವರ್ಷಗಳ ಅವಧಿಯಲ್ಲಿ 58 ಸಾವಿರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಕಣ್ಣು ಮುಚ್ಚಿ ಕುಳಿತಿವೆ. ಶಿಕ್ಷೆಯ ಪ್ರಮಾಣ ಶೇ4 ರಷ್ಟು ಮಾತ್ರ ಇದೆ. ಇದು ದುರದೃಷ್ಟಕರ ಎಂದು ಹೇಳಿದರು.

ಭಾರತ ಸರ್ವ ಜನಾಂಗದ ತಾಣ. ಅದನ್ನು ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ. ಕೇಂದ್ರ ಸರ್ಕಾರದಲ್ಲಿ ಸಂವಿಧಾನ ವಿರೋಧಿಗಳಿದ್ದಾರೆ. ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂವಿಧಾನ ಉಳಿಯಬೇಕು ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಮೋದಿ ಭಾರತ ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿಲ್ಲ. ರಾಜ್ಯದಲ್ಲಿ 198 ಕೊಲೆಗಳಾಗಿವೆ. ಶೇ 2ರಷ್ಟು ಶಿಕ್ಷೆಯಾಗಿದೆ. ಪರಿಸ್ಥಿತಿ ಹೀಗಾದರೆ ಮಹಿಳೆಯರು ನಿರ್ಭಯವಾಗಿ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಇಲ್ಲಿನಸಂಸದರು ಗುಲಾಮಗಿರಿ ಬಿಟ್ಟು ನೊಂದವರ ನೆರವಿಗೆ ಬರಬೇಕು. ಮೀಸಲು ಕ್ಷೇತ್ರಗಳಿಂದ ಗೆದ್ದುಬರುವ ಮುಖಂಡರು, ಯಾವರ ನೆರವಿನಿಂದ ಅಧಿಕಾರ ಪಡೆದರೋ ಅವರ ಕಷ್ಟಕ್ಕೆ ಸ್ಪಂದಿಸಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ ಎಂದು ವಿಶಾದ
ವ್ಯಕ್ತಪಡಿಸಿದರು.

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ದೌರ್ಜನ್ಯಕ್ಕೆ ಮಣಿಯದೆ ಎದುರಿಸುವ ಎದೆಗಾರಿಕೆ ಪ್ರದರ್ಶಿಸಬೇಕು. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ಹೆಣ್ಣು ಮಕ್ಕಳ ವಿರುದ್ಧ ನಡೆಯುವ ದಬ್ಬಾಳಿಕೆ ಒಂದು ಸಾಮಾಜಿಕ ಕಳಂಕವಾಗಿದ್ದು, ಸಮಾಜದ ಎಲ್ಲ ವರ್ಗದ ಜನರೂ ಅಂಥ ಘಟನೆಗಳನ್ನು ಒಕ್ಕೊರಲಿನಿಂದ ಖಂಡಿಸಬೇಕು. ಹೆಣ್ಣು ಮಕ್ಕಳ ಪೀಡಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದರು.

ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಡಾ. ಕೋದಂಡರಾಮ್, ಎಸ್.ನಾರಾಯಣ
ಸ್ವಾಮಿ, ಡಿಟಿಎಂ ಶಿವಪ್ರಸಾದ್, ವಡ್ಡಗೆರೆ ನಾಗರಾಜಯ್ಯ, ಶಾಂತಮ್ಮ, ವೆಂಕಟನಾಯಿಡಮ್ಮ ಘಟನೆಯನ್ನು ಖಂಡಿಸಿ ಮಾತನಾಡಿದರು.

ಮುಖಂಡರಾದ ಎನ್.ವೆಂಕಟೇಶ್, ಮುನಿರಾಜು, ವಸಂತ ವನನೇಹಳ್ಳಿ, ಹೆಬ್ಬಾಳ ವೆಂಕಟೇಶ್, ಡಾ. ಕುಮಾರಸ್ವಾಮಿ, ಜೆ.ಇ.ಮಂಜುನಾಥ್, ಎಂ.ಆನಂದ್ ಕುಮಾರ್, ಸಿ.ಜಿ.ಗಂಗಪ್ಪ, ಪುಟ್ಟಲಕ್ಷ್ಮಮ್ಮ, ಜಿ.ಮುನಿರೆಡ್ಡಿ, ವರ್ತನಹಳ್ಳಿ ವೆಂಕಟೇಶ್, ಮುನೇಶ್, ರಾಮಾಂಜಮ್ಮ, ವರದನಹಳ್ಳಿ ವೆಂಕಟೇಶ್, ವಿ.ಮುನಿಯಪ್ಪ, ಚಲ್ದಿಗಾನಹಳ್ಳಿ ಈರಪ್ಪ, ಟಿ.ತಿಮ್ಮಯ್ಯ, ಕೂತ್ಸಂದ್ರ ರೆಡ್ಡಪ್ಪ, ಜಯರಾಮ್, ಕಾರಳ್ಳಿ ಶ್ರೀನಿವಾಸ್, ಶಾಂತಮ್ಮ, ನಾರಾಯಣಮ್ಮ, ರವಿ, ಹೊನ್ನೇನಹಳ್ಳಿ ವೆಂಕಟೇಶ್, ಗಾಂಧೀನಗರ ವೆಂಕಟೇಶ್, ಮುಳವಾಗಿಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT