ಗುರುವಾರ , ನವೆಂಬರ್ 26, 2020
20 °C
ರೈಲು ಮಾರ್ಗಕ್ಕೆ ಗುರುತಿಸಲಾದ ಜಮೀನು ಮಾರುವಂತಿಲ್ಲ, ಅಭಿವೃದ್ಧಿ ಪಡಿಸುವಂತಿಲ್ಲ ಗೊಂದಲದಲ್ಲಿ ರೈತರು

ಮುಳಬಾಗಿಲು: ಸರ್ವೆ ಬಳಿಕ ಸ್ತಬ್ಧಗೊಂಡ ರೈಲ್ವೆ ಯೋಜನೆ

ಜಿ.ವಿ.ಪುರುಷೋತ್ತಮರಾವ್ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿಗೆ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವಕ್ಕೆ ದಶಕಗಳೇ ಕಳೆದಿದೆ. ಯೋಜನೆಗೆ ಅಡಿಗಲ್ಲು ಹಾಕಲಾಗಿದೆ. ಆದರೆ ಸದ್ಯಕ್ಕೆ ರೈಲು ಬರುವ ಸೂಚನೆಗಳು ಮಾತ್ರ ಕಾಣುತ್ತಿಲ್ಲ.

ರೈಲು ಮಾರ್ಗಕ್ಕಾಗಿ 2016ರ ಆಗಸ್ಟ್‌ನಲ್ಲಿ 13 ಗ್ರಾಮಗಳಲ್ಲಿ 222 ಎಕರೆ ಜಮೀನನ್ನು ರೈಲ್ವೆ ಇಲಾಖೆ ಗುರುತಿಸಿತ್ತು. ಆನಂತರ ಭೂಸ್ವಾಧೀನಕ್ಕಾಗಿ ಕಂದಾಯ ಇಲಾಖೆ ಸಮೀಕ್ಷೆ ಮಾಡಿ ವರದಿ ಕಳುಹಿಸಿತ್ತು. ಆದರೆ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡು ರೈಲು ಮಾರ್ಗ ನೆನೆಗುದ್ದಿಗೆ ಬಿದ್ದಿದೆ.

ಹನುಮನಹಳ್ಳಿ, ಕುರುಬರಹಳ್ಳಿ, ಅನಂತಪುರ, ಜಮ್ಮನಹಳ್ಳಿ, ಚಿಕ್ಕಮಾದೇನಹಳ್ಳಿ, ವಿರೂಪಾಕ್ಷಿ, ಗುಟ್ಟಹಳ್ಳಿ, ಮುಳಬಾಗಿಲು ಗ್ರಾಮ ಕುಮದೇನಹಳ್ಳಿ ತುರುಕರಹಳ್ಳಿ, ಇಂಡ್ಲಕೆರೆ, ಸೊನ್ನವಾಡಿ, ನರಸೀಪುರದಿನ್ನೆ ಗ್ರಾಮಗಳಲ್ಲಿ ಜಮೀನು ಸರ್ವೆ ಮಾಡಲಾಗಿದೆ. ಜಮೀನು ಮಾಲೀಕರಿಗೆ ಭೂಸ್ವಾಧೀನದ ಪರಿಹಾರವೂ ದೊರೆತಿಲ್ಲ. ಇತ್ತ ಜಮೀನು ಅಥವಾ ನಿವೇಶನವನ್ನು ಮಾರಾಟ ಮಾಡುವ ಹಾಗೂ ಇಲ್ಲ. ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಯಾರನ್ನು ಕೇಳಬೇಕು ಎಂದು ತಿಳಿಯದ ರೈತರು ಗೊಂದಲದಲ್ಲಿದ್ದಾರೆ.

ಜಮೀನು ಸರ್ವೆ ಸಂದರ್ಭದಲ್ಲಿ ಮಾಲೀಕರು ತಮ್ಮ ಆಸ್ತಿ ನಷ್ಟದ ಲೆಕ್ಕಾಚಾರ ಹಾಕಿ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅಳಲು ತೋಡಿಕೊಂಡಿದ್ದರು. ತಮಗೆ ಸೇರಿದ ಪೂರ್ತಿ ಜಮೀನು ರೈಲ್ವೆ ಇಲಾಖೆಗೆ ಸೇರಬಹುದೆಂದು ಅತಂಕ ವ್ಯಕ್ತಪಡಿಸಿದ್ದರು. ತುರುಕರಹಳ್ಳಿ ಆರ್. ತಿಮ್ಮಯ್ಯ, ನರಸೀಪುರದಿನ್ನೆಯ ಮುನಿಯಪ್ಪ, ಕಿಟ್ಟಪ್ಪ, ನಾಗರಾಜು, ಶಂಕರಪ್ಪ, ನಾರಾಯಣಸ್ವಾಮಿ ಅವರು ಸಂಪೂರ್ಣ ಜಮೀನು ಸ್ವಾಧೀನಕ್ಕೆ ಒಳಪಡಲಿದ್ದು ಪರ್ಯಾಯ ವ್ಯವಸ್ಥೆ ಇಲ್ಲದೆ ತೊಂದರೆ ಆಗುತ್ತದೆ ಎಂದು ತಮ್ಮ ಆಳಲು ತೊಡಿಕೊಂಡಿದ್ದರು.

ಸರ್ವೆ ಮುಗಿದು ನಾಲ್ಕು ವರ್ಷವಾಗಿದೆ. ಜಮೀನು ಸರ್ವೆ ಮಾಡಿದ್ದರಿಂದ ಮಾಲೀಕರು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಅತ್ತ ರೈಲ್ವೆ ಇಲಾಖೆ ಪರಿಹಾರ ನೀಡುವ ಯಾವುದೇ ಭರವಸೆಯನ್ನು ನೀಡಿಲ್ಲ. ಸರ್ವೆಯಾಗಿರುವ ಜಮೀನನ್ನು ರೈಲ್ವೆ ಇಲಾಖೆಗೆ ನೀಡಲು ಮಾಲೀಕರು ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಹೀಗಾಗಿ ಬೆಳೆ ಬೆಳೆಯಲೂ ಹಿಂದೇಟು ಹಾಕುತ್ತಿದ್ದಾರೆ.

ಕನಸು ಈಡೇರುವ ಲಕ್ಷಣಗಳಿಲ್ಲ
ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಎಂ.ವಿ. ಕೃಷ್ಣಪ್ಪ ರೈಲ್ವೆ ಸಚಿವರಾಗಿದ್ದರು. ಅವರಿಗೂ ತಮ್ಮ ಸ್ವಂತ ತಾಲ್ಲೂಕಿಗೆ ರೈಲು ಸಂಪರ್ಕ ಒದಗಿಸಲು ಸಾಧ್ಯವಾಗಲಿಲ್ಲ. ಸಂಸದ ಕೆ.ಎಚ್.ಮುನಿಯಪ್ಪ ಅವರ ಕಾಲದಲ್ಲೂ ಹೋರಾಟ ನಡೆದಿತ್ತು. ಆಗ ರೈಲು ಮಾರ್ಗದ ನಿರ್ಮಾಣ ಯೋಜನೆಗೆ ಸಮ್ಮತಿ ಸಿಕ್ಕಿತ್ತು. ಆದರೆ ಅದಕ್ಕೆ ಪೂರಕ ನೆರವು ಸಿಕ್ಕಿಲ್ಲ. ರೈಲು ಮಾರ್ಗ ನಿರ್ಮಾಣ ಸಾಧ್ಯವಾದರೆ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ಮಾರುಕಟ್ಟೆ ಅಭಿವೃದ್ಧಿಗೂ ಸಹಕಾರಿ ಆಗುತ್ತದೆ ಆದರೆ ಕನಸು ಈಡೇರುವ ಸೂಚನೆಗಳಿಲ್ಲ ಎನ್ನುತ್ತಾರೆ ನಿವೃತ ಸಂಖ್ಯಾಶಾಸ್ತ್ರಧಿಕಾರಿ ಹಾಗೂ ರೈಲ್ವೆ ಯೋಜನೆಗೆ ಜಮೀನು ನೀಡಿರುವ ಎಸ್.ವಿ. ವೆಂಕಟಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.