ಜಿಲ್ಲೆಯಲ್ಲಿ ತುಂತುರು ಮಳೆ: ರೈತರಿಗೆ ಸಂತಸ

7

ಜಿಲ್ಲೆಯಲ್ಲಿ ತುಂತುರು ಮಳೆ: ರೈತರಿಗೆ ಸಂತಸ

Published:
Updated:
Deccan Herald

ಕೋಲಾರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗುರುವಾರ ಸುಮಾರು 2 ತಾಸು ತುಂತುರು ಮಳೆ ಸುರಿಯಿತು.

ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜತೆಗೆ ಶೀತ ಗಾಳಿ ಪ್ರಮಾಣ ಹೆಚ್ಚಿತ್ತು. ಆಗೊಮ್ಮೆ ಈಗೊಮ್ಮೆ ಮೋಡಗಳ ಮರೆಯಲ್ಲಿ ಸೂರ್ಯ ಇಣುಕಿ ಮರೆಯಾದ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭವಾದ ತುಂತುರು ಮಳೆ 2 ಗಂಟೆವರೆಗೆ ಸುರಿಯಿತು. ನಂತರ ಬಿಟ್ಟು ಬಿಟ್ಟು ಮಳೆಯಾಯಿತು.

ಹಲವು ತಿಂಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ದಿಢೀರ್ ಪ್ರತ್ಯಕ್ಷವಾಗಿದ್ದಕ್ಕೆ ಜನ ಅಚ್ಚರಿಗೊಂಡರು. ಸಾರ್ವಜನಿಕರು, ಶಾಲಾ ಮಕ್ಕಳು ಟೋಪಿ, ಸ್ವೆಟರ್‌ ಹಾಗೂ ರೈನ್‌ಕೋಟ್‌ ಧರಿಸಿ ಛತ್ರಿ ಹಿಡಿದು ಸಾಗುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿಗಳ ಕೆಳಗೆ ಹಾಗೂ ಪೆಟ್ರೋಲ್‌ ಬಂಕ್‌ಗಳ ಬಳಿ ನಿಂತಿದ್ದ ದೃಶ್ಯ ಕಂಡುಬಂತು.

ಮುಂಗಾರು ಹಂಗಾಮಿನಲ್ಲಿ ಕೈಕೊಟ್ಟಿದ್ದ ಮಳೆಯು ಹಿಂಗಾರು ಆರಂಭಕ್ಕೂ ಮುನ್ನವೇ ಜಿಲ್ಲೆಯನ್ನು ಪ್ರವೇಶಿಸಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ವರುಣ ದೇವನ ಅವಕೃಪೆಯಿಂದಾಗಿ ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ ಬಿತ್ತನೆ ಕುಂಠಿತವಾಗಿತ್ತು. ಮಳೆ ಕೊರತೆಯಿಂದ ರಾಗಿ, ಜೋಳ, ಅವರೆ ಹಾಗೂ ತೊಗರಿ ಬೆಳೆ ಒಣಗಲಾರಂಭಿಸಿದ್ದವು. ಅಳಿದುಳಿದ ಬೆಳೆಗಳಿಗೆ ತುಂತುರು ಮಳೆ ವರದಾನವಾಗಲಿದೆ ಎಂದು ರೈತರು ಸಂತಸಗೊಂಡಿದ್ದಾರೆ.

‘ಹಿಂಗಾರು ಹಂಗಾಮಿನಲ್ಲಿ ನವೆಂಬರ್‌ ತಿಂಗಳ ಅಂತ್ಯದವರೆಗೂ ವಾಡಿಕೆಗಿಂತ ಶೇ 10ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅ.6ರ ನಂತರ ಮಳೆ ತೀವ್ರಗೊಳ್ಳಲಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !