ರಾಮನಾಮ ಸ್ಮರಿಸುತ್ತಿರುವ ಮಾಗೊಂದಿಯ ಪಾಜಾಸಾಬ್

7

ರಾಮನಾಮ ಸ್ಮರಿಸುತ್ತಿರುವ ಮಾಗೊಂದಿಯ ಪಾಜಾಸಾಬ್

Published:
Updated:
ಬಂಗಾರಪೇಟೆ ಮಾಗೊಂದಿ ಗ್ರಾಮದ ಚಿಕ್ಕ ಕೊಠಡಿಯಲ್ಲಿ ರಾಮಕೋಟಿ ಬರೆಯುತ್ತಿರುವ ಪಾಜಾಸಾಬ್ 

ಬಂಗಾರಪೇಟೆ: ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರೂ ಹಿಂದೂ ಆರಾಧ್ಯ ದೈವ ರಾಮನೆಂದರೆ ಅಪಾರ ನಂಬಿಕೆ ಮತ್ತು ಭಕ್ತಿ. ಸುಮಾರು 2 ದಶಕದಿಂದ ರಾಮನಾಮ ಜಪಿಸುತ್ತಿರುವ ವೃದ್ಧ. ಡಿಸೆಂಬರ್ ಒಳಗೆ ರಾಮಕೋಟಿ ಪೂರ್ಣಗೊಳಿಸುವ ಛಲ ಪಾಜಾಸಾಬ್‌ದು

ತಾಲ್ಲೂಕಿನ ಮಾಗೊಂದಿ ನಿವಾಸಿ ಪಾಜಾಸಾಬ್ ಅವರೇ 22 ವರ್ಷದಿಂದ ರಾಮಕೋಟಿ ಬರೆಯುತ್ತಿರುವವರು. ಇತರರಿಗೂ ರಾಮನ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಪಡೆದಿರುವ ಅವರು 88 ಲಕ್ಷ ಬಾರಿ ರಾಮನ ಹೆಸರು ಬರೆದಿದ್ದಾರೆ.

6 ತಿಂಗಳಲ್ಲಿ ರಾಮಕೋಟಿ ಪೂರ್ಣಗೊಳಿಸಿ, ಜನವರಿಯಲ್ಲಿ ಭದ್ರಾಚಲಂನ ರಾಮನ ದೇಗುಲಕ್ಕೆ ಅರ್ಪಿಸುವ ಅಭಿಲಾಷೆ ಅವರದ್ದು. 96 ವರ್ಷ ಇಳಿವಯಸಿನಲ್ಲೂ ಯುವಕರಂತೆ ಚುರುಕಾಗಿರುವ ಅವರಿಗೆ ರಾಮಕೋಟಿಯಿಂದ ಆರೋಗ್ಯ, ಆಯಸ್ಸು ಹೆಚ್ಚಿದ್ದು, ಆಸೆ ಕಡಿಮೆಯಾಗಿದೆಯಂತೆ.

ಸರ್ವಧರ್ಮ ಸಮನ್ವಯ ತತ್ವ ಪಾಲಿಸುತ್ತಿರುವ ಅವರಿಗೆ ಶಿಶುನಾಳ ಷರೀಫ್‌ ಮತ್ತು ಕಬೀರದಾಸರ ತತ್ವಗಳೇ ಸ್ಫೋರ್ತಿ. ಧರ್ಮಗಳು ಬೇರೆಯಾದರೂ ಉದ್ದೇಶ ಒಂದೇ. ವಿಭಿನ್ನ ಹೆಸರುಗಳಿದ್ದರೂ ದೇವರು ಒಬ್ಬನೇ ಎನ್ನುವುದು ಅವರ ನಂಬಿಕೆ. ವಾರದ ಪ್ರತಿ ಶುಕ್ರವಾರ ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಅವರು ತಿಮ್ಮರಾಯಸ್ವಾಮಿ ದೇಗುಲದಲ್ಲಿ ಪ್ರತಿ ಶನಿವಾರ ನಡೆಯುವ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ದಾರಿಯಲ್ಲಿ ಸಿಗುವ ಚರ್ಚ್‌ಗಳ ಮುಂದೆ ನಿಂತು ನಮಸ್ಕರಿಸುವುದನ್ನೂ ರೂಢಿಸಿಕೊಂಡಿದ್ದಾರೆ.

22 ವರ್ಷದ ಹಿಂದೆ ಆಂಧ್ರಪ್ರದೇಶದ ಭದ್ರಾಚಲಂ ರಾಮನ ದೇಗುಲಕ್ಕೆ ತೆರಳಿದ್ದ ಸಂದರ್ಭ ವ್ಯಕ್ತಿಯೊಬ್ಬರು ರಾಮನಾಮ ಸ್ಮರಣೆ, ರಾಮಕೋಟಿ ಬಗ್ಗೆ ತಿಳಿಸಿದರು. ಆ ವ್ಯಕ್ತಿಯ ಮಾತುಗಳು ನನಗೆ ರಾಮಕೋಟಿ ಬರೆಯಲು ಪ್ರೇರಣೆ ನೀಡಿತು ಎಂದು ಪಾಜಾಸಾಬ್ ಹೇಳುತ್ತಾರೆ.

ರಾಮಕೋಟಿ ಬರೆಯಲು ನಿತ್ಯ ಮೂರು ಗಂಟೆ ಮೀಸಲಿಡುವ ಅವರು ಬೆಳಿಗ್ಗೆ 7 ಗಂಟೆಗೆ ಆರಂಭಿಸಿ 10 ಗಂಟೆವರೆಗೂ ರಾಮನ ಹೆಸರು ಬರೆಯುತ್ತಾರೆ. ಆರಂಭದಲ್ಲಿ ತಾಮ್ರದ ಫಲಕ, ಒಣ ಎಲೆ, ಕಾಲಿ ಹಾಳೆಗಳಲ್ಲಿ ರಾಮನಾಮ ಬರೆಯುತ್ತಿದ್ದ ಇವರು ದಶಕದಿಂದ ನೋಟ್ ಪುಸ್ತಕದಲ್ಲಿ ಬೆರೆಯುತ್ತಿದ್ದಾರೆ.

ಪುಸ್ತಕದಲ್ಲಿ ಶಿವಲಿಂಗ, ಆಂಜನೇಯ, ಬಾಬಯ್ಯ ಹಸ್ತ, ವೀಳ್ಯದೆಲೆ, ಭಾರತ ಧ್ವಜ, ಆತ್ಮಲಿಂಗ, ಗಣೇಶನ ಚಿತ್ರಗಳನ್ನು ಬಿಡಿಸಿ, ಆ ಚಿತ್ರಗಳ ಆಕೃತಿಯ ಒಳಗೆ ರಾಮನ ಹೆಸರು ಬರೆದಿರುವುದು ವಿಶೇಷ. ವೀರುಬ್ರಹ್ಮಯ್ಯ ಅವರ ಶಿಷ್ಯ ಸಿದ್ದರಾಮ ಅವರ ವಂಶಕ್ಕೆ ಸೇರಿದ ಪಿಂಜಾರ ಮುಸ್ಲಿಂ ಮನೆತನಕ್ಕೆ ಸೇರಿದವರು ಎನ್ನುವ ಹೆಗ್ಗಳಿಕೆ ಅವರಿಗಿದೆ.

ಮೈಸೂರು ಸರ್ಕಾರದಲ್ಲಿ ಇನ್‌ಸ್ಪೆಕ್ಟರ್ ಒಬ್ಬರ ಸೂಚನೆಯಂತೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರ ಕಾರ್ಯವೈಖರಿಯನ್ನು ಗುರುತಿಸಿದ ರಾಜ್ಯ ಸರ್ಕಾರ ಇವರನ್ನು ಶಿಕ್ಷಕರಾಗಿ ನೇಮಕಗೊಳಿಸಿತ್ತು. ನಂತರ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಪಡೆದರು. ಬಾಲಗೃಹ ಪೀಡಿತ ಮಕ್ಕಳಿಗೆ ಉಚಿತವಾಗಿ ಆಂಜನೇಯ ತಾಯ್ತ ಕಟ್ಟುವುದರಲ್ಲಿ ಸಿದ್ದಿ ಪಡೆದಿರುವ ಇವರು ಜ್ಯೋತಿಷ್ಯ ಹೇಳುವುದನ್ನೂ ರೂಢಿಸಿಕೊಂಡಿದ್ದಾರೆ. ಶಾಸಕರು, ಸಚಿವರಿಗೆ ಭವಿಷ್ಯ ನುಡಿದು, ನಿರೂಪಿಸಿದ್ದಾರೆ.

ಗ್ರಾಮದ ಚಿಕ್ಕ ಮನೆಯಲ್ಲಿ ಪತ್ನಿ ಬಾಬನ್ ಬೀ ಅವರೊಂದಿಗೆ ವಾಸವಿರುವ ಪಾಜಾಸಾಬ್ ಅವರಿಗೆ ಒಬ್ಬ‌ ಮಗಳಿದ್ದು, ಆಂಧ್ರಪ್ರದೇಶದ ವ್ಯಕ್ತಿಯೊಬ್ಬರಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಸರ್ಕಾರ ನೀಡುತ್ತಿರುವ ಪಿಂಚಣಿಯೆ ಇವರ ಜೀವನಕ್ಕೆ ಆಧಾರ. ಸದ್ಯಕ್ಕೆ ಮೊಮ್ಮಗಳ ಆರೈಕೆಯಲ್ಲಿ ವೃದ್ಧ ದಂಪತಿ ಜೀವನ ದೂಡುತ್ತಿದ್ದಾರೆ.

ಡಿಸೆಂಬರ್ ಒಳಗೆ ರಾಮಕೋಟಿ ಮುಗಿಸಿ, ಭದ್ರಾಚಲಂಗೆ ತೆರಳುವ ಹಂಬಲ ಹೊಂದಿರುವ ಪಾಜಾಸಾಬ್ ಅವರಿಗೆ ಹಣದ ಸಹಕಾರ ಬೇಕಿದೆ. ಹಿಂದಿನ ಶಿಕ್ಷಣ ಸಚಿವ ತನ್ವೀರ್ ಸೇಠ್, ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೂ ಇವರು ತಮ್ಮ ಹಂಬಲ ತಿಳಿಸಿದ್ದಾರೆ. ಆದರೆ ಇದುವರೆಗೂ ಆರ್ಥಿಕ ಸಹಾಯ ದೊರೆತಿಲ್ಲ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತವರನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !