ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ: ಜ್ಞಾನಪ್ರಕಾಶ್ ಸ್ವಾಮೀಜಿ ಕಳವಳ

ಉರಿಲಿಂಗಪೆದ್ದಿ ಮಠ
Last Updated 14 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕೋಲಾರ: ‘ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿರುವ ಪ್ರವಾಹ ವಿಕೋಪಕ್ಕೆ ಜಾತಿಯಿಲ್ಲ. ಆದರೆ, ಪರಿಹಾರ ವಿತರಣೆಗೆ ಜಾತಿ ಆಧಾರದಲ್ಲಿ ನಿರಾಶ್ರಿತರಿಗೆ ಪ್ರತ್ಯೇಕ ಪುನರ್ವಸತಿ ಕೇಂದ್ರ ತೆರೆದು ಜಾತೀಯತೆಯ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಇಲ್ಲಿ ಬುಧವಾರ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಶಾಸಕರನ್ನು ಖರೀದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧನಪ್ರಭುತ್ವವಾಗಿ ಮಾಡಿ ಸಂವಿಧಾನದ ಆಶಯವನ್ನು ನಾಶಪಡಿಸಿದ್ದಾರೆ’ ಎಂದು ವಿಷಾದಿಸಿದರು.

‘ಮತ ಪೆಟ್ಟಿಗೆಯಲ್ಲಿ ಮತ ಚಲಾವಣೆ ಮಾಡಿ ಜನಪ್ರತಿನಿಧಿಗಳಿಂದ ದೇಶದ ಭವಿಷ್ಯ ಕಾಣಬೇಕಾದ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳನ್ನೇ ಖರೀದಿಸುವ ಮೂಲಕ ವ್ಯವಸ್ಥೆಯ ದಾರಿ ತಪ್ಪಿಸಲು ಹೊರಟಿದ್ದಾರೆ. ಜನರ ಕೈಯಲ್ಲಿರುವ ಮತದಾನದ ಹಕ್ಕನ್ನು ವಿವೇಕಯುತವಾಗಿ ಬಳಸಿ ಸದೃಢ ಭಾರತ ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಅಂಬೇಡ್ಕರ್ ಎಲ್ಲಾ ಜಾತಿಗಳಿಗೆ ಮೀಸಲಾತಿ ಕೊಟ್ಟರು. ಅಂಬೇಡ್ಕರ್ ದಲಿತರ ನಾಯಕರಾದರೇ ಹೊರತು ಮೀಸಲಾತಿ ಅನುಭವಿಸುವವರ ನಾಯಕರಾಗಲಿಲ್ಲ. ವಿದ್ಯಾರ್ಥಿಗಳು ಓದಿನ ಅಂಕ ಗಳಿಕೆಗಿಂತ ಮಾನವೀಯ ಮೌಲ್ಯದ ಅಂಕ ಗಳಿಸುವುದು ಮುಖ್ಯ. ವಿದ್ಯಾರ್ಥಿಗಳಿಗೆ ನೈತಿಕತೆಯ ಶಿಕ್ಷಣ ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಲೆಎತ್ತಿ ನಿಲ್ಲಬೇಕು: ‘ತುಳಿತಕ್ಕೆ ಒಳಗಾದ ಜನರು ಅರ್ಜಿ ಕೊಡುವ ಜಾಗದಲ್ಲಿರದೆ ಅರ್ಜಿ ತೆಗೆದುಕೊಳ್ಳುವ ಹುದ್ದೆಗಳಲ್ಲಿ ಇರಬೇಕು. ಬಲಹೀನರು ಹಾಗೂ ಶೋಷಣೆಗೆ ಒಳಗಾದವರನ್ನು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಬಲದಿಂದ ಸ್ವಾಭಿಮಾನದಿಂದ ತಲೆಎತ್ತಿ ನಿಲ್ಲುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ₹ 13 ಕೋಟಿ ಅಂದಾಜು ವೆಚ್ಚದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿ ದಲಿತರನ್ನು ಆರ್ಥಿಕವಾಗಿ ಸಬಲಗೊಳಿಸುತ್ತೇವೆ. ತುಳಿತಕ್ಕೆ ಒಳಗಾದವರು ಸಂಘದ ಆರ್ಥಿಕ ನೆರವು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಸೋಮಶೇಖರ್, ಡಿವೈಎಸ್ಪಿ ಆರ್.ವಿ.ಚೌಡಪ್ಪ, ಚಿತ್ರದುರ್ಗದ ಶರಣ ಗುರುಪೀಠದ ಬಸವನಾಗಿ ಸ್ವಾಮೀಜಿ, ಮೈಸೂರಿನ ಮದಕ ಶರಣಮಠದ ಸಿದ್ದರಾಮಶರಣ ಸ್ವಾಮೀಜಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ದಲಿತ ಸಂಘಟನೆಗಳ ಮಹಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT