ಗುರುವಾರ , ಜನವರಿ 21, 2021
18 °C

ಮತದಾನದ ಕರ್ತವ್ಯ ಮರೆಯದಿರಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತದಾನವು ಕರ್ತವ್ಯವೆಂದು ಭಾವಿಸಿ ಉತ್ತಮ ನಾಯಕನ ಆಯ್ಕೆಗೆ ಪ್ರತಿ ಮತವೂ ಮೌಲ್ಯಯುತವಾದದ್ದು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ತಾಲ್ಲೂಕಿನ ಅರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಪ್ರಸಕ್ತ ಸಾಲಿನಲ್ಲಿ 37 ಮಂದಿ ಹೊಸ ಮತದಾರರು ನೋಂದಣಿಯಾಗಿರುವ ಸಂಬಂಧ ಪರಿಶೀಲನೆ ನಡೆಸಲು ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯು ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾಧಿಕಾರಿಯು ಪ್ರಥಮ ಬಾರಿ ಮತ ಚಲಾಯಿಸಿದವರ ಅನುಭವ ಕೇಳಿದಾಗ ಯುವ ಮತದಾರರು, ‘ನಮಗೆ ತುಂಬಾ ಖುಷಿಯಾಗಿದೆ. ಮತದಾನದ ಹಕ್ಕು ಚಲಾಯಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಯಿತು’ ಎಂದರು.

‘ಹಣ, ಆಮಿಷಗಳಿಗೆ ಬಲಿಯಾಗುತ್ತೀರಾ?’ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ಯುವ ಮತದಾರರು, ‘ಖಂಡಿತ ಇಲ್ಲ. ನಮ್ಮ ಮತ ಮಾರಿಕೊಳ್ಳುವುದಿಲ್ಲ, ನಮಗೆ ರಾಜಕೀಯ ಪಕ್ಷ ಬೇಕಾಗಿಲ್ಲ, ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಯತ್ನವಾಗಿ ಮತ ಚಲಾಯಿಸುತ್ತೇವೆ’ ಎಂದು ತಿಳಿಸಿದರು.

‘ಮತದಾನ ಪವಿತ್ರವಾದ ಕೆಲಸ, ಇದರಿಂದ ವಿಮುಖರಾಗಬಾರದು. ಚುನಾವಣಾ ಆಯೋಗ ಮತದಾನ ಪ್ರಮಾಣ ಹೆಚ್ಚಿಸಬೇಕೆಂಬ ಆಶಯ ಹೊಂದಿದೆ. ಪ್ರತಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಬರಬೇಕು’ ಎಂದು ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.

ಒಳ್ಳೆಯ ಲಕ್ಷಣವಲ್ಲ: ‘ವಿದ್ಯಾವಂತರು ಮತದಾನದ ದಿನ ರಜೆ ಸಿಕ್ಕಿತೆಂದು ಪ್ರವಾಸಕ್ಕೆ ಹೋಗುವ ಮನಸ್ಥಿತಿ ಒಳ್ಳೆಯ ಲಕ್ಷಣವಲ್ಲ. ದೇಶದ ಅಭಿವೃದ್ಧಿಗೆ ಜನಪ್ರತಿನಿಧಿಗಳ ಆಯ್ಕೆಗೆ ಸಿಕ್ಕ ಅವಕಾಶದಿಂದ ವಂಚಿತರಾಗಬಾರದು’ ಎಂದು ಸಲಹೆ ನೀಡಿದರು.

‘ಒಂದೇ ಗ್ರಾಮದಲ್ಲಿ 37 ಮತದಾರರು ಪಟ್ಟಿಗೆ ಸೇರ್ಪಡೆ ಆಗಿರುವುದರಿಂದ ಊಹಾಪೋಹ ಸೃಷ್ಟಿಯಾಗಿದೆ. ಮತದಾರರನ್ನು ನೋಡಿ. ಮಾತನಾಡಿದ ನಂತರ ತಪ್ಪಾಗಿಲ್ಲ ಎಂದು ಗೊತ್ತಾಗಿದೆ. ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುವುದನ್ನು ಮರೆಯದಿರಿ’ ಎಂದರು.

ಮತಗಟ್ಟೆ ಅಧಿಕಾರಿ ಎಂ.ವೆಂಕಟೇಶ್ 37 ಮಂದಿ ಹೊಸ ಮತದಾರರನ್ನು ಆಹ್ವಾನಿಸಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ದಾಖಲೆಪತ್ರ ತೋರಿಸಿದ ನಂತರ ಊಹಾಪೋಹಕ್ಕೆ ತೆರೆ ಬಿದ್ದಿತು. ಚುನಾವಣಾ ಶಾಖೆ ತಹಶೀಲ್ದಾರ್ ನಾಗವೇಣಿ, ಗ್ರಾ.ಪಂ ನೂತನ ಸದಸ್ಯ ಜಗದೀಶ್, ಗ್ರಾಮ ಲೆಕ್ಕಿಗ ಗೌತಮ್, ಅರಹಳ್ಳಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ಶಿಕ್ಷಕರಾದ ಸಾವಿತ್ರಮ್ಮ, ಮುರಳಿ, ನಾಗರತ್ನಮ್ಮ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.