ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಸಣ್ಣ ನೀರಾವರಿ ಸಚಿವರಿಗೆ ರೈತ ಸಂಘ ಸದಸ್ಯರ ಕೋರಿಕೆ

ಕೆ.ಸಿ ವ್ಯಾಲಿ: ಕೆರೆ ತುಂಬಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯ ಕೆರೆಗಳನ್ನು ತುಂಬಿಸುವ ಉದ್ದೇಶಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಯೋಜನೆಯಿಂದ ಜಿಲ್ಲೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಕೆಲವೇ ತಾಲ್ಲೂಕುಗಳ ಕೆರೆಗಳು ಮಾತ್ರ ಭರ್ತಿಯಾಗಿವೆ’ ಎಂದು ಸಂಘಟನೆ ಸದಸ್ಯರು ದೂರಿದರು.

‘ಕೆ.ಸಿ ವ್ಯಾಲಿ ನೀರಿನ ಕಳವು ನಡೆಯುತ್ತಿದೆ. ರೈತರು ಯೋಜನೆ ವ್ಯಾಪ್ತಿಯ ಕಾಲುವೆಗಳಿಂದ ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿದ್ದಾರೆ. ಹಲವೆಡೆ ನಿಯಮಬಾಹಿರವಾಗಿ ಕೃಷಿ ಚಟುವಟಿಕೆಗಳಿಗೆ ಕೆ.ಸಿ ವ್ಯಾಲಿ ನೀರು ಬಳಕೆ ಮಾಡಲಾಗುತ್ತಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

‘ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆಗಳು ಹಾಗೂ ಕಂದಾಯ ಇಲಾಖೆಯ ಗೋಮಾಳಗಳು ಒತ್ತುವರಿ ಆಗಿವೆ. ಅಧಿಕಾರಿಗಳು ಹಣದಾಸೆಗೆ ಭೂಗಳ್ಳರ ಜತೆ ಶಾಮೀಲಾಗಿ ಕೆರೆಯಂಗಳದ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಕೊಡುತ್ತಿದ್ದಾರೆ. ಕೆರೆಗಳ ಅಂಗಳದಲ್ಲಿ ಅಕ್ರಮವಾಗಿ ಲೇಔಟ್‌ಗಳು ತಲೆ ಎತ್ತಿವೆ. ಅಲ್ಲದೇ, ಮನೆಗಳನ್ನು ಕಟ್ಟಲಾಗಿದೆ’ ಎಂದು ಹೇಳಿದರು.

‘ಕೋಲಾರ ಜಿಲ್ಲೆಯು ಈ ಹಿಂದೆ ಕೆರೆಗಳ ತವರು ಎಂದು ಖ್ಯಾತಿಯಾಗಿತ್ತು. ನದಿ ಮೂಲವಿಲ್ಲದಿದ್ದರೂ ಮಳೆಯಿಂದಲೇ ಕೆರೆಗಳು ಭರ್ತಿಯಾಗುತ್ತಿದ್ದವು. ಆದರೆ, ಈಗ ಒತ್ತುವರಿಯಿಂದ ಕೆರೆಗಳ ಸ್ವರೂಪವೇ ಬದಲಾಗಿದೆ. ಸಾಕಷ್ಟು ಕೆರೆಗಳು ಕಣ್ಮರೆಯಾಗಿವೆ. ರಾಜಕಾಲುವೆಗಳ ಒತ್ತುವರಿಯಿಂದಾಗಿ ನೀರು ಸರಾಗವಾಗಿ ಕೆರೆಗಳಿಗೆ ಹರಿದು ಬರುತ್ತಿಲ್ಲ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷ ತಂಡ: ‘ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ವಿಚಾರವನ್ನು ಸಂಸದರೇ ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು. ಅಲ್ಲದೇ, ಒತ್ತುವರಿಗೆ ಸಂಬಂಧಿಸಿದ ದಾಖಲೆಪತ್ರಗಳು ತಮ್ಮ ಬಳಿ ಇರುವುದಾಗಿಯೂ ಸಂಸದರು ಹೇಳಿದ್ದರು. ಹೀಗಾಗಿ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

‘ಕೆ.ಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಗೆ 400 ಎಂಎಲ್‌ಡಿ ನೀರು ಹರಿಸಬೇಕು. ಜತೆಗೆ ಯೋಜನೆ ವ್ಯಾಪ್ತಿಯ ಕೆರೆಗಳು ಹಾಗೂ ನೀರಿನ ಕಾಲುವೆಗಳ ಒತ್ತುವರಿ ತೆರವು ಮಾಡಬೇಕು. ಕೆರೆ ಹಾಗೂ ಗೋಮಾಳಗಳ ಸಂರಕ್ಷಣೆಗೆ ಹೆಚ್ಚು ಗಮನ ಹರಿಸಬೇಕು’ ಎಂದು ಕೋರಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಹನುಮಯ್ಯ, ಕಿರಣ್, ಚಾಂದ್‌ಪಾಷಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು