ಮಂಗಳವಾರ, ಸೆಪ್ಟೆಂಬರ್ 17, 2019
21 °C
ವಿ.ಗೀತಾ ಅವರಿಗೆ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ

ಮೀಸಲಾತಿ ಸಾಮಾಜಿಕ ನ್ಯಾಯದ ಅಣು

Published:
Updated:
Prajavani

ಕೋಲಾರ: ‘ಮೀಸಲಾತಿ ಸಾಮಾಜಿಕ ನ್ಯಾಯದ ಸಣ್ಣ ಅಣು ಅಷ್ಟೇ. ಶ್ರಮಕ್ಕೆ ಸರಿಯಾಗಿ ಪ್ರತಿಫಲ ನೀಡುವುದೇ ಸಾಮಾಜಿಕ ನ್ಯಾಯ. ಉತ್ಪಾದನೆ ಆಗುವ ಸಂಪತ್ತು ಶ್ರಮಿಕರಿಗೆ ಸಿಗದೆ ಪರರ ಪಾಲಾಗುತ್ತಿರುವುದರಿಂದಲೇ ಬಡತನ, ನಿರುದ್ಯೋಗಕ್ಕೆ ಕಾರಣವಾಗುತ್ತಿದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಕಳವಳ ವ್ಯಕ್ತಪಡಿಸಿದರು.

ಡಾ.ಎಲ್.ಬಸವರಾಜು ಪ್ರತಿಷ್ಠಾನದ ವತಿಯಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಅಂಬೇಡ್ಕರ್ ಎಂದರೆ ಮೀಸಲಾತಿ ಅಲ್ಲ, ಅಂಬೇಡ್ಕರ್ ಅವರನ್ನು ಮೀಸಲಾತಿಗೆ ಸೀಮಿತಗೊಳಿಸುವಸಿರುವುದು ಅಸಹ್ಯ ಹುಟ್ಟಿಸುತ್ತಿದೆ’ ಎಂದು ತಿಳಿಸಿದರು.

‘ಜಾತ್ಯಾತೀತ ಎಂದರೆ ಸರ್ವ ಧರ್ಮಗಳನ್ನು ಸಮನಾಗಿ ಕಾಣುವುದು ಎಂದಲ್ಲ. ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವ ಸಾಮಾಜಿಕ ವ್ಯವಸ್ಥೆಯೇ ಜಾತ್ಯಾತೀತ. ಸರ್ಕಾರದ ಕಾರ್ಯಕ್ರಮಗಳು ಧರ್ಮದ ಅಡಿಯಾಳಾಗಿಸದಿರುವುದೇ ಜಾತ್ಯತೀತ ವ್ಯವಸ್ಥೆ. 70 ವರ್ಷಗಳ ಗಣತಂತ್ರದಲ್ಲಿ ರಾಜಕೀಯ ಪ್ರಜಾಪ್ರಭುತ್ವದಲ್ಲಿ ಮುಂದಿದ್ದರೂ ಆರ್ಥಿಕ ಮತ್ತು ಸಾಮಾಜಿಕವಾಗಿ ಸಮೀಕರಿಸುವ ಕೆಲಸ ಆಗಿಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ಸಂವಿಧಾನವನ್ನು ಪಾಲಿಸಬೇಕಾಗಿರುವ ಸರ್ಕಾರಗಳಿಂದಲೇ ಉಲ್ಲಂಘನೆ ಆಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ, ಸಮಾಜದಲ್ಲಿ ಪ್ರತಿ ಕ್ಷಣವೂ ಉಲ್ಲಂಘನೆಯಾಗಿ ಹೋರಾಟ, ಪರಿಶ್ರಮದ ಮೂಲಕ ಗಳಿಸಿದ್ದನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಸಂವಿಧಾನಾತ್ಮಕವಾಗಿ ಧ್ವನಿ ಎತ್ತಿ ಸಂವಿಧಾನ ಉಳಿಸಿದರೆ ಮಾತ್ರ ಗಳಿಸಿದ್ದನ್ನು ಉಳಿಸಿಕೊಳ್ಳಬಹುದು’ ಎಂದು ಎಚ್ಚರಿಸಿದರು.

‘ಬಾಲ್ಯದಿಂದಲೇ ಬಡತನ, ಕಷ್ಟಗಳನ್ನು ಅನುಭವಿಸಿಕೊಂಡು ಬೆಳೆದ ವಿ.ಗೀತಾ ಎರಪಂಥೀಯ ಹೋರಾಟಗಳ ಮೂಲಕ ರಾಜ್ಯ ಮಟ್ಟಕ್ಕೆ ಬೆಳೆದಿದ್ದಾರೆ. ಹೋರಾಟಗಾರ್ತಿಯನ್ನು ಗುರುತಿಸಿರುವುದು ಜಾತ್ಯತೀತ ಶಕ್ತಿಗೆ ನೀಡಿದ ಗೌರವ. ಅವರ ಪ್ರತಿಯೊಂದು ಹೋರಾಟಕ್ಕೂ ನೈತಿಕ ಬೆಂಬಲ ನೀಡುವ ಮೂಲಕ ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಬೇಕು.

ಸಾಹಿತಿ ಲಕ್ಷ್ಮೀಪತಿ ಕೋಲಾರ ಮಾತನಾಡಿ, ‘ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಕೂಡ ಪ್ರಕೃತಿಯೆಂದು ಆಕೆಯ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುವ ಮೂಲಕ ಹೆಣ್ಣಿನ ಪಾತ್ರವನ್ನು ನಿರಾಕರಿಸಲಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಧರ್ಮ ಸ್ಥಾಪಕರಲ್ಲಿ ಹೀತೆ ಯಾವುದರಲ್ಲೂ ಹೆಣ್ಣು ಇಲ್ಲ, ಪಂಚಭೂತಗಳನ್ನು ಕರೆಯುವಾಗ ಮಾತ್ರ ಹೆಣ್ಣಿನ ಹೆಸರಿನಿಂದ ಕರೆಯಲಾಗುತ್ತಿದೆ. ಜನಸಂಖ್ಯೆಯಲ್ಲಿ ಶೇ. 50ರಷ್ಟಿರುವ ಹೆಣ್ಣಿನ ಸೃಜನಶೀಲತೆ, ಪ್ರತಿಭೆಯನ್ನು ದಮನ ಮಾಡಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತೆಲಂಗಾಣ ಹೋರಾಟದಲ್ಲಿ ಎಡಪಂಥೀಯ ಚಳವಳಿ ಪ್ರಮುಖ ಪಾತ್ರ ವಹಿಸಿತ್ತು.ಅದರಲ್ಲೂ ಹೆಣ್ಣುಮಕ್ಕಳಾದ ಕಮಲಮ್ಮ, ಸ್ವರಾಜ್ ಹೋರಾಗಾರ್ತಿಯರ ಕೊಡುಗೆ ಅಪಾರವಾದುದು. ಅದೇ ರೀತಿ ವಿ. ಗೀತಾ ಹೋರಾಟದ ಕಿಚ್ಚಿದೆ. ಮಾತು ಮತ್ತು ನಡವಳಿಕೆಗೆ ಪೂರಕವಾಗಿ ಬದುಕುತ್ತಿದ್ದಾರೆ. ಕಾಯಕದ ಬಗ್ಗೆ ಪ್ರೀತಿ ಇದೆ’ ಎಂದರು.

ಪ್ರಶಸ್ತಿ ಪುರಸ್ಕೃತೆ ವಿ.ಗೀತಾ ಮಾತನಾಡಿ, ‘ದಲಿತ ಮತ್ತು ಕಮ್ಯನಿಸ್ಟ್ ಚಳುವಳಿಗಳು ಇನ್ನನ್ನು ಇಂದಿಗೂ ಚಳುವಳಿಯಲ್ಲಿ ಉಳಿಯಲು ಕಾರಣವಾಗಿದೆ. ನನ್ನನ್ನು ಪೋಷಣೆ ಮಾಡಿದ್ದು, ಬೆಳೆಸಿದ್ದು ಕೂಡ ಚಳುವಳಿಯ ನಾಯಕರೇ. ಈ ಹಿಂದೆ ಕಲೆ, ಭಾಷೆ, ಜಾತಿ ವ್ಯವಸ್ಥೆ, ಶೋಷಣೆ ವಿರುದ್ದದ ಬೀದಿ ನಾಟಕಗಳು ನನ್ನ ಮೇಲೆ ಗಾಢ ಪ್ರಭಾವ ಬೀರಿದೆ’ ಎಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಪುರುಷೋತ್ತಮರಾವ್, ಸಾಹಿತಿ ಡಾ.ಚಂದ್ರಶೇಖರ ನಂಗಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹಾಜರಿದ್ದರು.

Post Comments (+)