ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ರೌಡಿಗಳಿಗೆ ಗಡಿಪಾರು ಎಚ್ಚರಿಕೆ

Published 22 ಜುಲೈ 2023, 6:06 IST
Last Updated 22 ಜುಲೈ 2023, 6:06 IST
ಅಕ್ಷರ ಗಾತ್ರ

ಕೋಲಾರ: ‘ಪಂಚಾಯಿತಿ ಚುನಾವಣೆ ಬರುತ್ತಿದ್ದು, ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಿಮ್ಮ ಜವಾಬ್ದಾರಿ. ತುಟಿಕ್ ಪಿಟಿಕ್ ಎಂದರೆ ನಾನು ಸುಮ್ಮನಿರಲ್ಲ. ಹಳ್ಳಿ ಹಳ್ಳಿಯಲ್ಲಿಯೂ ಕನಿಷ್ಠ 10ರಿಂದ 20 ಮಂದಿಯನ್ನು ಗಡಿಪಾರು ಮಾಡಿಸುತ್ತೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಪರೇಡ್‍ನಲ್ಲಿ ಭಾಗವಹಿಸಿದ್ದ ರೌಡಿ ಶೀಟರ್‌ಗಳಿಗೆ ಬುದ್ಧಿವಾದ ಹೇಳಿದ ಅವರು, ‘ರೌಡಿ ಚಟುವಟಿಕೆಗಳನ್ನು ಬಿಡಿಸುವ ಸಲುವಾಗಿ ನಿಮ್ಮನ್ನು ಇಲ್ಲಿಗೆ ಕರೆಯಿಸಿದ್ದೇವೆ. ಬಿಡದಿದ್ದರೆ ಗೂಂಡಾ ಕಾಯ್ದೆ, ಗಡಿಪಾರನ್ನೂ ಮೀರಿದ ಅಸ್ತ್ರಗಳು ನಮ್ಮಲ್ಲಿವೆ’ ಎಂದರು.

‘ನಿಮ್ಮ ಕುಟುಂಬದವರ ತಂಟೆಗೆ ಯಾರಾದ್ರೂ ಬಂದರೆ ಲಾಂಗು, ಮಚ್ಚು ಹಿಡಿದು ಹೋಗುತ್ತೀರಿ. ಕುಟುಂಬಕ್ಕೆ ಯಾವುದೇ ತೊಂದರೆಯಾಗಬಾರದು ಎನ್ನುವುದು ನಿಮ್ಮ ಭಾವನೆಯಾಗಿದ್ದು, ಅಂತೆಯೇ ನಿಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಒಳ್ಳೆಯ ಮಾತಿಂದ ರೌಡಿಗಳನ್ನು ಇಲ್ಲಿಗೆ ಕರೆಸಿದ್ದೇವೆ. ಪರಿವರ್ತನೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ. ಪರಿವರ್ತನೆಯಾಗದಿದ್ದರೆ ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ.
ಎಂ.ನಾರಾಯಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕೋಲಾರ

‘ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೀವು ಯಾವುದೇ ಅಕ್ರಮ ಚಟುವಟಿಕೆಗಳಾದ ಭೂ ಮಾಫಿಯಾ, ಮದ್ಯ ಮಾರಾಟ, ಗಲಾಟೆಗಳು, ಬೆದರಿಕೆ ಹಾಕುವುದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು, ಮಾರಕಾಸ್ತ್ರಗಳೊಂದಿಗೆ ಫೋಟೋ, ವಿಡಿಯೋ ಹಾಕುವುದು ಇವೆಲ್ಲವೂ ನಿಲ್ಲಬೇಕು. ನಿಮ್ಮ ಮೇಲೆ ಅಲ್ಲದೆ ನಿಮ್ಮ ಸಾಮಾಜಿಕ ಜಾಲತಾಣಗಳ ಮೇಲೆಯೂ ಹದ್ದಿನ ಕಣ್ಣು ಇಡಲಾಗಿದೆ.

ನಿಮ್ಮ ತೋಳ್ಬಲ, ಶಕ್ತಿ ತೋರ್ಪಡಿಸಿದರೆ ಸರಿಯಾಗಿ ಇರುವುದಿಲ್ಲ. ಜಿಲ್ಲೆಯಲ್ಲಿ 2 ಸಾವಿರ ಪೊಲೀಸರು ಇದ್ದೇವೆ. ಒಬ್ಬೊಬ್ಬ ರೌಡಿ ಶೀಟರ್ ಮೇಲೆ 5 ಮಂದಿ ನಿಗಾ ಇಡುತ್ತೇವೆ. ಸಾರ್ವಜನಿಕರು, ಮಾಧ್ಯಮದವರು ಮಾಹಿತಿ ನೀಡುತ್ತಾರೆ. ನೀವೂ ಬದುಕಿ, ಬೇರೆಯವರನ್ನು ಬದುಕಲು ಬಿಡಿ. ಅದನ್ನು ಬಿಟ್ಟು ಬೇರೆ ಕೆಲಸಗಳಿಗೆ ಕೈ ಹಾಕಿದರೆ, ನಾವು ಏನು ಮಾಡುತ್ತೇವೆಂದು ಹೇಳುವುದಿಲ್ಲ. ಮಾಡಿ ತೋರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ರೌಡಿ ಶೀಟ್‌ನಿಂದ ತೆಗೆಯಬೇಕಾದರೆ ಬೇರೆ ಯಾವುದೇ ಹಳೆಯ ಪ್ರಕರಣ ನಿಮ್ಮ ಮೇಲೆ ಇರಬಾರದು, ಟ್ರಯಲ್ ಇರಬಾರದು, ಪೆಟ್ಟಿ ಕೇಸ್ ಇರಬಾರದು, ಹೊಸ ಪ್ರಕರಣವೂ ದಾಖಲಾಗಿರಬಾರದು. ಸತ್ಪ್ರಜೆಗಳಾಗಿ ಒಳ್ಳೆಯ ಜೀವನ ರೂಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಜೂಜಾಟ, ಮರಳು ದಂಧೆ, ಹೆಣ್ಣುಮಕ್ಕಳನ್ನು ಚುಡಾಯಿಸುವುದು ಸೇರಿದಂತೆ ಯಾವ ಕೆಲಸವೂ ಆಗಬಾರದು. ಗಾಂಜಾ, ಸಲ್ಯೂಷನ್‍ನ ಪುಂಡಪೋಕರಿಗಳ ಬಗ್ಗೆಯೂ ಮಾಹಿತಿ ನೀಡಿ. ಒಂದು ಅಥವಾ 2 ತಿಂಗಳಲ್ಲಿ ಮತ್ತೆ ಕರೆಯಿಸುತ್ತೇನೆ. ನಿಮ್ಮ ನಡವಳಿಕೆ ಬಗ್ಗೆ ವರದಿ ಪಡೆಯುತ್ತೇನೆ. ಕಾನೂನು ಪರಿಪಾಲನೆ ಮಾಡಿದರೆ ಗೌರವ ಕೊಡುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್, ಡಿವೈಎಸ್ಪಿ ಮುರಳೀಧರ್, ಸಿಪಿಐಗಳಾದ ಲೋಕೇಶ್, ಹರೀಶ್, ವೆಂಕಟರಾಮಯ್ಯ, ಅಣ್ಣಯ್ಯ, ಇನ್ನಿತರ ವೃತ್ತ ನಿರೀಕ್ಷರು, ಪಿಎಸ್‍ಐಗಳು ಭಾಗವಹಿಸಿದ್ದರು.

319 ರೌಡಿಗಳ ಪರೇಡ್‌

ಕೋಲಾರ ಜಿಲ್ಲೆ ವ್ಯಾಪ್ತಿಗೆ ಸೇರಿದ ನಾಲ್ಕು ತಾಲ್ಲೂಕುಗಳಿಂದ ಒಟ್ಟು 663 ರೌಡಿಗಳ ಪೈಕಿ 319 ಮಂದಿ ಪರೇಡ್‌ಗೆ ಹಾಜರಾಗಿದ್ದರು ಎಂದು ಎಸ್‌ಪಿ ನಾರಾಯಣ ತಿಳಿಸಿದರು. ‘ಇನ್ನುಳಿದ ರೌಡಿಗಳು ಪರೇಡ್‌ಗೆ ಗೈರಾಗಿದ್ದಾರೆ. ಮುಂದಿನ ಪರೇಡ್‍ನಲ್ಲಿ ಹಾಜರುಪಡಿಸಿ ಎಚ್ಚರಿಕೆ ನೀಡಲಾಗುವುದು. ಕೆಲವರು ಮನವರ್ತನೆಯಾಗಿ ಸಮಾಜಘಾತುಕ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಕೆಲವರು ಕಾಯಿಲೆಗಳಿಗೆ ತುತ್ತಾಗಿ ಅಶಕ್ತರಾಗಿದ್ದಾರೆ ಇನ್ನು ಕೆಲವರು ಜೈಲಿನಲ್ಲಿದ್ದಾರೆ. ಹಲವರಿಗೆ 60 ವರ್ಷ ದಾಟಿದೆ. ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಆಶಕ್ತರನ್ನು ರೌಡಿ ಶೀಟ್‍ನಿಂದ ಬಿಡುಗಡೆ ಮಾಡಲಾಗಿದೆ. 10 ವರ್ಷಗಳಿಂದ ಯಾವುದೇ ಪ್ರಕರಣಗಳಿಲ್ಲದೆ ಕಾನೂನಿಗೆ ಭಂಗ ಉಂಟು ಮಾಡದೆ ಶಾಂತಿಯಿಂದ ಜೀವನ ನಿರ್ವಹಿಸುತ್ತಿರುವವರ ಬಿಡುಗಡೆಗೆ ಚಿಂತಿಸಲಾಗುವುದು’ ಎಂದರು.

19 ಮಂದಿ ಗಡಿಪಾರು

‘ಕಾನೂನು ಪ್ರಕಾರ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪದೇಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಂಥ ಇಬ್ಬರ ಮೇಲೆ ಈಗಾಗಲೇ ಗೂಂಡಾ ಕಾಯ್ದೆ ದಾಖಲಿಸಿದ್ದು 19 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಒಂದು ವರ್ಷ ಅವರು ಈ ಕಡೆಗೆ ಬರುವಂತಿಲ್ಲ. ಗೂಂಡಾ ಕಾಯ್ದೆ ದಾಖಲಿಸಿದರೆ ಒಂದು ವರ್ಷ ಜಾಮೀನು ಸಹ ಸಿಗುವುದಿಲ್ಲ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಆದಾಯಕ್ಕೆ ತೊಂದರೆಯಾಗುವುದಲ್ಲದೆ ಕುಟುಂಬ ಮಕ್ಕಳೊಂದಿಗೆ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಮದುವೆಯಾಗದಿರುವವರಿಗೆ ಹೆಣ್ಣು ಕೊಡುವುದಕ್ಕೆ ಯಾರೂ ಮುಂದೆ ಬರುವುದಿಲ್ಲ’ ಎಂದು ನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT