ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಅಗ್ರಹಾರ: ಅಧಿಕಾರಿಗಳು– ರೈತರ ವಾಗ್ವಾದ

ಜನ್ನಘಟ್ಟ ಕೆರೆಗೆ ನೀರು ಹರಿಸಲು ವಿರೋಧ: ಪೊಲೀಸ್‌ ಭದ್ರತೆಯಲ್ಲಿ ತೂಬು ತೆರವು
Last Updated 26 ಏಪ್ರಿಲ್ 2020, 15:25 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಎಸ್.ಅಗ್ರಹಾರ ಕೆರೆಯಿಂದ ಜನ್ನಘಟ್ಟ ಕೆರೆಗೆ ನೀರು ಹರಿಸಲು ಮುಂದಾದ ಅಧಿಕಾರಿಗಳಿಗೆ ಸ್ಥಳೀಯ ರೈತರು ಭಾನುವಾರ ವಿರೋಧ ವ್ಯಕ್ತಪಡಿಸಿದ್ದರಿಂದ ಪರಸ್ಪರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಎಸ್.ಅಗ್ರಹಾರ ಕೆರೆಯಲ್ಲಿ ಸಂಗ್ರಹವಾಗಿರುವ ಕೆ.ಸಿ ವ್ಯಾಲಿ ಯೋಜನೆ ನೀರು ಮುಂದಿನ ಜನ್ನಘಟ್ಟ ಕೆರೆಗೆ ಹರಿಯುತ್ತಿಲ್ಲ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಹಶೀಲ್ದಾರ್‌ ಶೋಭಿತಾ ನೇತೃತ್ವದಲ್ಲಿ ಬೆಳಿಗ್ಗೆ ಎಸ್‌.ಅಗ್ರಹಾರ ಕೆರೆಯ ತೂಬು ತೆರೆದು ನೀರು ಹರಿಸಲು ಮುಂದಾದರು.

ಎಸ್‌.ಅಗ್ರಹಾರ, ರಾಜಕಲ್ಲಹಳ್ಳಿ, ಶೆಟ್ಟಿಹಳ್ಳಿ, ನಾಗನಾಳ, ಅಂಕತಟ್ಟಿ, ಹೊಸ ಮಟ್ನಹಳ್ಳಿ, ಸುಗಟೂರು, ಮಟ್ನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಕೆರೆಯಿಂದ ನೀರು ಹರಿಸದಂತೆ ಪಟ್ಟು ಹಿಡಿದು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ನಂತರ ಅಧಿಕಾರಿಗಳು ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಬಿಗಿ ಭದ್ರತೆಯಲ್ಲಿ ಕೆರೆಯ ತೂಬು ತೆಗೆದು ನೀರು ಹೊರಗೆ ಹರಿಸಿದರು. ಇದರಿಂದ ಕೆರಳಿದ ರೈತರು, ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೆ.ಸಿ ವ್ಯಾಲಿ ನೀರಿನಿಂದ ಎಸ್.ಅಗ್ರಹಾರ ಕೆರೆ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಆದರೆ, ಅಧಿಕಾರಿಗಳು ಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ಕೋಡಿ ಮೂಲಕ ಹರಿಯಲು ಬಿಡದೆ ತೂಬು ತೆರೆದು ಹೊರ ಬಿಟ್ಟಿದ್ದಾರೆ. ಅಧಿಕಾರಿಗಳು ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್‌ರ ಒತ್ತಡಕ್ಕೆ ಮಣಿದು ಎಸ್‌.ಅಗ್ರಹಾರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಶಾಸಕರ ದೌರ್ಜನ್ಯ: ‘ಎಸ್.ಅಗ್ರಹಾರ ಕೆರೆಗೆ ಕಳೆದ ಕೆಲ ದಿನಗಳಿಂದ ಕೆ.ಸಿ ವ್ಯಾಲಿ ನೀರು ಬರುತ್ತಿದೆ. ಕೆರೆ ಕೋಡಿ ಹರಿಯುವ ಮುನ್ನವೇ ರಮೇಶ್‌ಕುಮಾರ್ ತಮ್ಮ ಶ್ರೀನಿವಾಸಪುರ ಕ್ಷೇತ್ರಕ್ಕೆ ನೀರು ತೆಗೆದುಕೊಂಡು ಹೋಗುವ ಏಕೈಕ ಕಾರಣಕ್ಕೆ ಪೊಲೀಸ್‌ ಬಲ ಬಳಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳು ರಮೇಶ್‌ಕುಮಾರ್‌ರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ’ ಎಂದು ಗುಡುಗಿದರು.

‘ಕೆ.ಸಿ ವ್ಯಾಲಿ ನೀರು ಕಾಲುವೆಗಳ ಮೂಲಕ ಹರಿದು ಬಂದು ಕೆರೆ ತುಂಬುವ ಹಂತಕ್ಕೆ ಬಂದಿತ್ತು. ಕೆರೆಯ ಸುತ್ತಮುತ್ತ ನೀರು ಬತ್ತಿದ್ದ ಕೊಳವೆ ಬಾವಿಗಳು ಮರುಪೂರಣಗೊಂಡಿದ್ದವು. ಆದರೆ, ರಮೇಶ್‌ಕುಮಾರ್ ಜನ್ನಘಟ್ಟ ಕೆರೆ ತುಂಬಿಸುವ ಅವಸರದಲ್ಲಿ ರೈತರ ಕ್ಷೇಮ ಹಾಳು ಮಾಡುತ್ತಿದ್ದಾರೆ’ ಎಂದು ದೂರಿದರು.

‘ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸಬೇಕಿದೆ. ಕೆರೆಯ ನೀರನ್ನು ಸಂಪೂರ್ಣವಾಗಿ ಹೊರ ಬಿಡುವುದಿಲ್ಲ. ಎಸ್.ಅಗ್ರಹಾರ ಕೆರೆಯಲ್ಲಿ ಶೇ 50ರಷ್ಟು ನೀರು ಉಳಿಸಿ ಉಳಿದ ನೀರನ್ನು ಮುಂದಿನ ಕೆರೆಗಳಿಗೆ ಹರಿಸಲಾಗುತ್ತಿದೆ. ಹೀಗಾಗಿ ಈ ಮಾರ್ಗೋಪಾಯ ಅನುಸರಿಸಲಾಗುತ್ತಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸುರೇಶ್‌ಕುಮಾರ್ ರೈತರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT