ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಜೀವನದ ಅವಿಭಾಜ್ಯ ಅಂಗ: ಶಿಕ್ಷಣಾಧಿಕಾರಿ ಅಶೋಕ್

ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಅಶೋಕ್ ಅಭಿಪ್ರಾಯ
Last Updated 19 ಮಾರ್ಚ್ 2021, 16:16 IST
ಅಕ್ಷರ ಗಾತ್ರ

ಕೋಲಾರ: ‘ದಿನನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ವಿಜ್ಞಾನವು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ವಿಜ್ಞಾನಿಗಳಾಗಿ ರೂಪಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ‘ಪ್ರತಿ ವಿಷಯವೂ ವಿಜ್ಞಾನದಿಂದಲೇ ಆರಂಭವಾಗುತ್ತದೆ. ತರ್ಕ ಆಧರಿಸಿ ವಿವರಣೆ ನೀಡುವುದೇ ವಿಜ್ಞಾನ. ವಿಜ್ಞಾನವಿಲ್ಲದೆ ಈ ಜಗತ್ತೇ ಇಲ್ಲ. ಗ್ರಾಮೀಣ ಜನರಿಗೂ ವಿಜ್ಞಾನದ ಅರಿವು ಮೂಡಿಸಬೇಕು. ವಿಜ್ಞಾನವನ್ನು ಜೀವನದ ಹವ್ಯಾಸವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

‘ಸಮಾಜದಲ್ಲಿ ಎದುರಾಗುವ ಸಮಸ್ಯೆಗೆ ವಿಜ್ಞಾನದಿಂದ ಪರಿಹಾರ ಕಂಡುಕೊಳ್ಳಬಹುದು. ಜಗತ್ತಿನಲ್ಲಿ ಆಗುವ ಪ್ರತಿ ಬೆಳವಣಿಗೆಗೂ ವೈಜ್ಞಾನಿಕ ಕಾರಣವಿರುತ್ತದೆ. ಇದನ್ನು ಅರಿಯದೆ ಅನೇಕರು ಮೂಢನಂಬಿಕೆಗೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆ ಮೂಲಕ ಅಂಧಕಾರ ತೊಡೆದು ಹಾಕಬೇಕು’ ಎಂದು ಸಲಹೆ ನೀಡಿದರು.

ಜ್ಞಾನ ಸಂಪಾದಿಸಿ: ‘ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿನ ಮೂಲಕ ಜ್ಞಾನ ಸಂಪಾದಿಸಬೇಕು. ಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನ ಪಡೆಯಬೇಕಾದರೆ ಮೊದಲು ಜ್ಞಾನದ ಬೆಳಕು ಪ್ರತಿಯೊಬ್ಬರಲ್ಲೂ ಮೂಡಬೇಕು. ವಿದ್ಯಾರ್ಥಿಗಳಲ್ಲಿ ಮೌಢ್ಯತೆ ತೊಲಗಿಸಲು ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಜ್ಞಾನ ವಿಜ್ಞಾನ ಸಮಿತಿ ಘಟಕಗಳನ್ನು ಆರಂಭಿಸಬೇಕು’ ಎಂದರು.

‘ನಮ್ಮಲ್ಲಿ ಅನೇಕ ಆಚಾರ ವಿಚಾರ ಇರುವುದರಿಂದ ಅನುಮಾನ, ಸಮಸ್ಯೆ ಸಹಜ. ಮಕ್ಕಳಿಗೆ ತಾತ್ವಿಕವಾಗಿ ವಿಜ್ಞಾನ ತಿಳಿಸುವುದರ ಬದಲಿಗೆ ಪ್ರಯೋಗಗಳ ಮೂಲಕ ಸಾಕ್ಷೀಕರಿಸಿ ಪ್ರದರ್ಶಿಸಿದರೆ ಬೇಗ ಕಲಿಯುತ್ತಾರೆ. ವಿಜ್ಞಾನ ಕಷ್ಟವಲ್ಲ. ಅದನ್ನು ಪ್ರಯೋಗಗಳ ಮೂಲಕ ಸಾಧಿಸಿ ಅರ್ಥೈಸಿಕೊಂಡರೆ ಹೆಚ್ಚು ಕಾಲ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ’ ಎಂದು ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಶ್ರೀನಿವಾಸ್‌ ಹೇಳಿದರು.

ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್, ಸಂಚಾಲಕ ಶರಣಪ್ಪ ಗಬ್ಬೂರ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT