ಗುರುವಾರ , ಅಕ್ಟೋಬರ್ 22, 2020
24 °C
ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಸಮಾಜಮುಖಿ ಸೇವಾ ಸಂಭ್ರಮ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವು ಸೇರಿದಂತೆ ಸೇವಾ ಸಂಭ್ರಮ ಯೋಜನೆಯಡಿ ವಿವಿಧ ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ’ ಎಂದು ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಟ್ರಸ್ಟ್‌ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಣಕಾಸು ನೆರವು ನೀಡಿ ಮಾತನಾಡಿ, ‘ಕಳೆದೊಂದು ದಶಕದಿಂದ ಮನ್ವಂತರ ಪ್ರಕಾಶನದ ಮೂಲಕ ಸಮಾಜ ಸೇವೆ ಚಟುವಟಿಕೆ ನಡೆಸಲಾಗುತ್ತಿದೆ. ಇದೀಗ ಇದೀಗ ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ರಚನಾತ್ಮಕ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದರು.

‘ಟ್ರಸ್ಟ್‌ನ ಆರ್ಥಿಕ ನೆರವಿಗೆ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಡ ರೋಗಿಗಳಿಗೆ ಸಹಾಯಕ್ಕಾಗಿ ಮನ್ವಂತರ ಆರೋಗ್ಯ ಮಿತ್ರ ಹೆಸರಿನಲ್ಲಿ ಆಂಬುಲೆನ್ಸ್‌ ವ್ಯವಸ್ಥೆ ಮಾಡುತ್ತೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಮತ್ತು ಉಳ್ಳವರು ತುರ್ತು ಸಂದರ್ಭದಲ್ಲಿ ಕೈಲಾದಷ್ಟು ಶುಲ್ಕ ಪಾವತಿಸಿ ಆಂಬುಲೆನ್ಸ್‌ ಸೇವೆ ಪಡೆಯಬಹುದು’ ಎಂದು ವಿವರಿಸಿದರು.

‘2021ರ ಜನವರಿ ತಿಂಗಳಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸುತ್ತೇವೆ. ರೋಗಿಗಳು ಅಪೇಕ್ಷಿಸುವ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತದೆ. ಕೋಲಾರ ನಗರದಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹೋಗಲು ಹಣದ ಸಮಸ್ಯೆಯಿರುವ ಗ್ರಾಮೀಣ ಭಾಗದ ಬಡ ಜನರನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕರೆದೊಯ್ಯಲು ಆಟೊ ವ್ಯವಸ್ಥೆ ಮಾಡಲು ಚಿಂತಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಆರೋಗ್ಯ ತಪಾಸಣೆ: ‘ಸೇವಾ ಮನೋಭಾವ ಹೊಂದಿರುವ ವೈದ್ಯರ ಸಹಕಾರದಿಂದ ಬಡ ರೋಗಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸುವ ಕಾರ್ಯಕ್ರಮ ರೂಪಿಸುತ್ತೇವೆ. ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಗುಣಾತ್ಮಕ ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸುತ್ತೇವೆ. ಹಿರಿಯ ನಾಗರಿಕರಿಗಾಗಿ ಹಗಲು ವಿಶ್ರಾಂತಿ ಕುಟೀರ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

ಟ್ರಸ್ಟ್‌ ಕಾರ್ಯದರ್ಶಿ ಅನಂತರಾಮ್, ಖಜಾಂಚಿ ಎಸ್.ಎನ್.ಪ್ರಕಾಶ್, ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.