ಲೈಂಗಿಕ ಅಲ್ಪಸಂಖ್ಯಾತರು ಹೋರಾಟಕ್ಕೆ ಸಜ್ಜಾಗಿ

ಶನಿವಾರ, ಮೇ 25, 2019
27 °C

ಲೈಂಗಿಕ ಅಲ್ಪಸಂಖ್ಯಾತರು ಹೋರಾಟಕ್ಕೆ ಸಜ್ಜಾಗಿ

Published:
Updated:
Prajavani

ಕೋಲಾರ: ‘ಲೈಂಗಿಕ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬರಲು ಹಕ್ಕು ಕಲ್ಪಿಸುವಂತೆ ನ್ಯಾಯಾಲಯ ತೀರ್ಪು ನೀಡಿದ್ದರೂ ಸರ್ಕಾರಗಳು ತೀರ್ಪಿನ ಅನುಷ್ಠಾನಕ್ಕೆ ಮೀನಮೇಷ ಎಣಿಸುತ್ತಿವೆ’ ಎಂದು ಸಂಗಮ ಸಂಸ್ಥೆಯ ವ್ಯವಸ್ಥಾಪಕಿ ನಿಶಾ ಗೂಳೂರು ಕಿಡಿಕಾರಿದರು.

ಸಂಗಮ ಹಾಗೂ ಸಮ್ಮಿಲನ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಟ್ರಾನ್ಸ್ ಫೋಬಿಯಾ ಮತ್ತು ಪೈಫೋಬಿಯಾ ದಿನಾಚರಣೆಯಲ್ಲಿ ಮಾತನಾಡಿ, ‘ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳಿಗೆ ಸರ್ಕಾರಗಳನ್ನು ನೆಚ್ಚಿ ಕೂತರೆ ಆಗುವುದಿಲ್ಲ. ಹಕ್ಕು ಪಡೆದುಕೊಳ್ಳಲು ಬೀದಿಗಿಳಿದು ಹೋರಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಈ ಹಿಂದೆ ಮಹಿಳೆಯರು ಮತ್ತು ದಲಿತರು ತಮ್ಮ ಹಕ್ಕು ಪಡೆಯಲು ಬೀದಿಗಿಳಿದು ನಾನಾ ರೀತಿಯಲ್ಲಿ ಹೋರಾಟ ನಡೆಸಿದ್ದರು. ಅದರ ಫಲವಾಗಿ ಅವರಿಗೆ ಹಕ್ಕು ಸಿಕ್ಕಿದವು. ಅದೇ ರೀತಿ ಲೈಂಗಿಕ ಅಲ್ಪಸಂಖ್ಯಾತರು ಹೋರಾಟ ನಡೆಸಿದರೆ ಹಕ್ಕು ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ತಿಳಿಸಿದರು.

‘ತೃತೀಯ ಲಿಂಗಿಗಳ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ 1970ರಲ್ಲಿ ಮತ್ತು ಭಾರತದಲ್ಲಿ 1998ರಲ್ಲಿ ಆರಂಭವಾಯಿತು. ಅಂಬೇಡ್ಕರ್ ನೀಡಿದ ಸಂವಿಧಾನದ ಅಸ್ತ್ರದಿಂದ ಲೈಂಗಿಕ ಅಲ್ಪಸಂಖ್ಯಾತರು ಎಲ್ಲರಂತೆ ಸಮನಾಗಿ ಬದುಕುವ ಹಕ್ಕು ಸಿಕ್ಕಿದೆ’ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ಶ್ರೀನಿವಾಸ್ ವಿವರಿಸಿದರು.

‘ಕೆಲವರು ದೇಶದ ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಈ ನಿಟ್ಟಿನಲ್ಲಿ ಒಳಗೊಳಗೆ ನಿರ್ಧಾರಗಳು ಆಗಿವೆ. ಎಂದಿಗೂ ಇದಕ್ಕೆ ಅವಕಾಶ ನೀಡಬಾರದು. ಸಂವಿಧಾನ ಬದಲಿಸುವ ಮಾತನಾಡುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಟ್ರಾನ್ಸ್ ಫೋಬಿಯಾ ಮತ್ತು ಪೈಫೋಬಿಯಾ ದಿನಾಚರಣೆ ಪ್ರಯುಕ್ತ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯ ಆಧಾರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಸಮ್ಮಿಲನ ಸಂಸ್ಥೆಯ ಪದಾಧಿಕಾರಿಗಳಾದ ಅಶ್ವಿನಿ ರಾಜನ್, ಅನೂಷಾ, ದಲಿತ ಮುಖಂಡರಾದ ಟಿ.ವಿಜಯ್‌ಕುಮಾರ್‌, ಚಂದ್ರಶೇಖರ್, ಮುನಿರಾಜು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !