ತ್ರಿವಿಧ ದಾಸೋಹಿಗೆ ಭಾವಪೂರ್ಣ ಶ್ರದ್ಧಾಂಜಲಿ

7
ಶಿವಕುಮಾರ ಸ್ವಾಮೀಜಿಯ ಗುಣಗಾನ: ಅಗಲಿದ ಚೇತನಕ್ಕೆ ಪುಷ್ಪನಮನ

ತ್ರಿವಿಧ ದಾಸೋಹಿಗೆ ಭಾವಪೂರ್ಣ ಶ್ರದ್ಧಾಂಜಲಿ

Published:
Updated:
Prajavani

ಕೋಲಾರ: ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಕೆಲ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿ ವಹಿವಾಟು ಸ್ಥಗಿತಗೊಳಿಸಿದರು. ಸಂಘಟನೆಗಳ ಸದಸ್ಯರು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸ್ವಾಮೀಜಿಯವರ ಭಾವಚಿತ್ರ ಹಾಕಿ ಪುಷ್ಪನಮನ ಸಲ್ಲಿಸಿದರು.

ಗಾಂಧಿವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ತಾಲ್ಲೂಕಿನ ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ‘ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಶಿವಕುಮಾರ ಸ್ವಾಮೀಜಿಯವರ ಸಾವು ಮನುಕುಲಕ್ಕೆ ನೋವು ತಂದಿದೆ’ ಎಂದು ಹೇಳಿದರು.

‘ದೇಶದಲ್ಲಿ ಯಾವ ಮಠದವರು ನೀಡದಷ್ಟು ಕೊಡುಗೆಯನ್ನು ಶಿವಕುಮಾರ ಸ್ವಾಮೀಜಿ ನೀಡುವ ಮೂಲಕ ಬೇರೆ ಮಠಗಳಿಗೆ ಮಾದರಿಯಾಗಿದ್ದಾರೆ. 111 ವರ್ಷಗಳ ತುಂಬು ಜೀವನ ನಡೆಸಿದ ಅವರು ತಮ್ಮ ಇಡೀ ಜೀವತಾವಧಿಯನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು’ ಎಂದು ಬಣ್ಣಿಸಿದರು.

‘ಸ್ವಾಮೀಜಿಯು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇದರ ಹಿಂದೆ ಸ್ವಾಮೀಜಿಯವರ ಶ್ರಮವಿದೆ’ ಎಂದು ಸ್ಮರಿಸಿದರು.

‘ಶ್ರೀಗಳು ಜಾತಿ, ಧರ್ಮ ಪಕ್ಷ ಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದ್ದಾರೆ. ಅವರ ತತ್ವಾದರ್ಶ, ಮಾರ್ಗದರ್ಶನ, ಆಶಯ, ಸಾಧನೆಗಳನ್ನು ಸಮಾಜಕ್ಕೆ ತಿಳಿಸಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

ಮಹಾ ತಪಸ್ವಿ: ‘ಶಿವಕುಮಾರ ಸ್ವಾಮೀಜಿಯವರು ಮಹಾ ತಪಸ್ವಿ, ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಅವರು ಅನ್ನ ದಾಸೋಹದ ಮೂಲಕ ಶಿಕ್ಷಣ ನೀಡಿ ಎಲ್ಲರ ಮನ ಗೆದ್ದಿದ್ದಾರೆ’ ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ್ ಕೆಂಪರಾಜ್ ಅಭಿಪ್ರಾಯಪಟ್ಟರು.

‘ಸ್ವಾಮೀಜಿಯವರಿಗೆ ಕೇಂದ್ರ ಸರ್ಕಾರವು ಭಾರತ್ನ ರತ್ನ ಪ್ರಶಸ್ತಿ ಪ್ರದಾನ ಮಾಡದಿದ್ದರೂ 25 ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಗಳು ಕಾಯಕವೇ ಕೈಲಾಸ ಎಂಬುದನ್ನು ತಮ್ಮ ಬದುಕಿನ ಮೂಲಕ ರಾಷ್ಟ್ರಕ್ಕೆ ಸಾರಿದ್ದಾರೆ. ಬಸವಣ್ಣರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ’ ಎಂದು ಹೇಳಿದರು.

ಗೌರವ ಸಲ್ಲಿಸಬೇಕು: ‘ವಿಶ್ವಸಂಸ್ಥೆ ಹೇಳಿರುವಂತೆ ಸಮಾಜಕ್ಕೆ ಮೂಲಸೌಕರ್ಯ ನೀಡಿರುವುದು ಶಿವಕುಮಾರ ಸ್ವಾಮೀಜಿಯವರು ಮಾತ್ರ. ನಾಡಿನ ಜನ ಅವರ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು. ಅವರಂತಹ ಆದರ್ಶಪ್ರಾಯರಿಗೆ ಪ್ರತಿಯೊಬ್ಬರ ಗೌರವ ಸಲ್ಲಿಸಬೇಕು’ ಎಂದು ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ನುಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಡಿ.ಎಂ.ಚನ್ನಪ್ಪ, ಸಹ್ಯಾದ್ರಿ ವಿದ್ಯಾಸಂಸ್ಥೆ ಅಧ್ಯಕ್ಷ ಉದಯ್‌ಕುಮಾರ್, ಜಿಲ್ಲಾ ವರ್ತಕರ ಸಂಘದ ಸದಸ್ಯ ವೆಂಕಟಾಚಲಪತಿ, ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್‌ ಮರಿಸ್ವಾಮಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಪುಲಿಕೇಶಿ ಕನ್ನಡಿಗರ ಸಂಘ, ಶಾಂತಿ ವಿದ್ಯಾನಿಕೇತನ ಸಂಸ್ಥೆ, ವರ್ತಕರ ಸಂಘದ ಸದಸ್ಯರು, ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !