ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗಯ್ಯ ದಲಿತರು–ಶೋಷಿತರ ಧ್ವನಿ

Last Updated 12 ಜೂನ್ 2021, 13:43 IST
ಅಕ್ಷರ ಗಾತ್ರ

ಕೋಲಾರ: ‘ಊರು ಕೇರಿಯಲ್ಲಿ ದಲಿತ ಚಳವಳಿ ಕಟ್ಟಿ, ಹೋರಾಟದ ಸಾಗರಕ್ಕೆ ಸಾವಿರಾರು ನದಿ ಸೇರಿಸಿದ ಕವಿ ಸಿದ್ದಲಿಂಗಯ್ಯ ಅವರು ದಲಿತರ, ಶೋಷಿತರ, ರೈತರ ಪರವಾಗಿ ಶಾಸನಗಳು ರೂಪುಗೊಳ್ಳಲು ಕಾರಣಕರ್ತರಾದರು’ ಎಂದು ಉಪ ವಿಭಾಗಾಧಿಕಾರಿ ಸಿ.ಸೋಮಶೇಖರ್‌ ಸ್ಮರಿಸಿದರು.

ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಾಹಿತ್ಯ, ಹೋರಾಟದ ಕ್ರಾಂತಿಯ ಜತೆಗೆ ರಾಜಕೀಯದಲ್ಲಿ ತೊಡಗಿಸಿಕೊಂಡ ಸಿದ್ದಲಿಂಗಯ್ಯ ಅವರು ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ದೂಷಿಸದೆ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು’ ಎಂದು ಬಣ್ಣಿಸಿದರು.

‘ಹೋರಾಟದ ಕಿಡಿ ಹೊತ್ತಿಸಿ ಹೊಸ ಮನ್ವಂತರಕ್ಕೆ ನಾಂದಿಯಾಡಿದ್ದ ಸಿದ್ದಲಿಂಗಯ್ಯ ಅವರು ನಮ್ಮ ಜತೆಗಿಲ್ಲ. ಆದರೆ, ಅವರ ಸಾಹಿತ್ಯ ಶಾಶ್ವತವಾಗಿ ಜತೆಗಿದೆ. ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ದಲಿತರು, ಶೋಷಿತರು, ರೈತರ ಧ್ವನಿಯಾಗಿ ಕೆಲಸ ಮಾಡಿದರು. ಅವರ ನಿಧನವು ನಾಡಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ’ ಎಂದು ಕಂಬನಿ ಮಿಡಿದರು.

‘ಹೋರಾಟದ ಹಾಡುಗಳಲ್ಲಿ, ದಲಿತ, ಬಂಡಾಯ ಸಾಹಿತ್ಯದಲ್ಲಿ ಮತ್ತು ಚಳವಳಿಯ ಆರಂಭದ ಭಾಷಣಗಳಲ್ಲಿ ಕಠೋರವಾಗಿ ಕಾಣಿಸುತ್ತಿದ್ದ ಸಿದ್ದಲಿಂಗಯ್ಯ ಅವರು ಅತ್ಯಂತ ಮಾನವೀಯ ಗುಣ ಹೊಂದಿದ್ದರು. ದಲಿತರ ಧ್ವನಿಯಾಗಿದ್ದ ಅವರು ದಲಿತ ಬಂಡಾಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಸಾಮಾಜಿಕ ಸಮಾನತೆಯ ಕವನ ರಚಿಸಿದ್ದರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು ಹೇಳಿದರು.

ಸಾಹಿತಿ ಶರಣಪ್ಪ ಗಬ್ಬೂರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರಾದ ಎಸ್‌.ಮುನಿಯಪ್ಪ, ವೆಂಕಟಕೃಷ್ಣಪ್ಪ, ಜಿ.ಶ್ರೀನಿವಾಸ್, ನಾ.ವೆಂಕಿ, ನಾರಾಯಣಸ್ವಾಮಿ, ಮುನಿವೆಂಕಟಪ್ಪ, ಚಂದ್ರಪ್ಪ, ವೆಂಕಟಸ್ವಾಮಿ, ಶಿವಕುಮಾರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT