ಬುಧವಾರ, ನವೆಂಬರ್ 20, 2019
23 °C

ಕೃಷಿ ಹೊಂಡದಲ್ಲಿ ಸಹೋದರಿಯರ ಸಾವು

Published:
Updated:

ಕೋಲಾರ: ತಾಲ್ಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ಸಹೋದರಿಯರಿಬ್ಬರು ಶುಕ್ರವಾರ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಗ್ರಾಮದ ರೈತ ಮಂಜುನಾಥ್ ಎಂಬುವರ ಮಕ್ಕಳಾದ ಚೈತ್ರಾ (23) ಮತ್ತು ಅಮೃತಾ (21) ಮೃತಪಟ್ಟವರು. ಈ ಇಬ್ಬರು ತಂದೆಯ ಜತೆ ಬೆಳಿಗ್ಗೆ ತಮ್ಮ ಜಮೀನಿಗೆ ಹೋಗಿದ್ದಾಗ ದುರ್ಘಟನೆ ನಡೆದಿದೆ.

ಮಂಜುನಾಥ್‌, ಚೈತ್ರಾ ಮತ್ತು ಅಮೃತಾ ಜಮೀನಿನಲ್ಲಿ ಜೋಳ ಕೊಯ್ದಿದ್ದಾರೆ. ನಂತರ ಕೈ ತೊಳೆದುಕೊಳ್ಳಲು ಕೃಷಿ ಹೊಂಡದ ಬಳಿ ಹೋದ ಸಹೋದರಿಯರು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಲ್ಪ ಸಮಯದ ಬಳಿಕ ತಂದೆಯು ಕೃಷಿ ಹೊಂಡದ ಬಳಿ ಹೋದಾಗ ಮಕ್ಕಳ ಶವ ತೇಲುತ್ತಿರುವುದು ಗೊತ್ತಾಗಿದೆ. ಮೃತರ ಶವಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪದವಿ ಶಿಕ್ಷಣ ಪೂರೈಸಿದ್ದ ಚೈತ್ರಾ ಟೈಲರಿಂಗ್‌ ತರಬೇತಿ ಪಡೆಯುತ್ತಿದ್ದರು. ಅಮೃತಾ ಅಂತಿಮ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)