ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಾಧಾರಿತ ಶಿಕ್ಷಣ: ಜಿಲ್ಲೆಗೊಂದು ಐಟಿಐ ಕಾಲೇಜು

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ: ಸಚಿವ ಶ್ರೀಮಂತ ಪಾಟೀಲ ಹೇಳಿಕೆ
Last Updated 2 ಸೆಪ್ಟೆಂಬರ್ 2020, 15:27 IST
ಅಕ್ಷರ ಗಾತ್ರ

ಕೋಲಾರ: ‘ಅಲ್ಪಸಂಖ್ಯಾತರಿಗೆ ಕೌಶಲಾಧಾರಿತ ಶಿಕ್ಷಣ ನೀಡಿ ಉದ್ಯೋಗ ಕಲ್ಪಿಸುವ ಉದ್ದೇಶಕ್ಕೆ ಜಿಲ್ಲೆಗೊಂದು ಐಟಿಐ ಹಾಗೂ ವಿಭಾಗಕ್ಕೊಂದು ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜವಳಿ, ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಐಟಿಐ ಕೋರ್ಸ್ ಮೂಲಕ ಫಿಟ್ಟರ್, ವೆಲ್ಡರ್, ವೈರ್‍ಮನ್ ಉದ್ಯೋಗಕ್ಕೆ ಅಗತ್ಯ ಕೌಶಲ ತರಬೇತಿ ನೀಡಲಾಗುತ್ತದೆ. ಈ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದರು.

‘ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಚ್ಚು ಬಡವರಿದ್ದಾರೆ. ಇವರಿಗೆ ಉದ್ಯೋಗ ಕಲ್ಪಿಸಲು ಅಗತ್ಯವಾದ ಶಿಕ್ಷಣ ನೀಡಬೇಕು. ಜತೆಗೆ ಇವರು ಸುಶಿಕ್ಷಿತರಾಗಿ ಸ್ವಾವಲಂಬಿಗಳಾಗಬೇಕು. ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಮೂಲಕ ಅಲ್ಪಸಂಖ್ಯಾತರು ಮತ್ತು -ಬಹುಸಂಖ್ಯಾತರ ನಡುವೆ ಅಂತರವಿಲ್ಲದಂತೆ ಮಾಡಬೇಕು’ ಎಂದು ಸೂಚಿಸಿದರು.

‘ಮೊರಾರ್ಜಿ ದೇಸಾಯಿ, ಮೌಲಾನಾ ಅಜಾದ್ ವಸತಿ ಶಾಲೆಗಳಲ್ಲಿ ಶೇ 50ರಷ್ಟು ಮಾತ್ರ ದಾಖಲಾತಿ ಆಗುತ್ತಿದೆ. ಪ್ರಚಾರದ ಕೊರತೆಯ ಕಾರಣಕ್ಕೆ ದಾಖಲಾತಿ ಕುಂಠಿತವಾಗಿದ್ದು, ಹಳ್ಳಿಗಳಿಗೂ ಹೋಗಿ ಪ್ರಚಾರ ಮಾಡಿ. ದಾಖಲಾತಿ ಪ್ರಮಾಣ ಶೇ 100ಕ್ಕೆ ಹೆಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ನೇಕಾರರ ಹಿತರಕ್ಷಣೆ: ‘ನೇಕಾರರ ಹಿತರಕ್ಷಣೆಗೆ ಬದ್ಧವಾಗಿರುವ ಸರ್ಕಾರ ಸಾಲ ಮನ್ನಾ ಮಾಡಿದೆ. ಅಲ್ಲದೇ, ನೇಕಾರರಿಗೆ ಆರ್ಥಿಕ ನೆರವು ನೀಡಿದೆ. ಆದರೂ 4 ಮಂದಿಗೆ ನೇಕಾರರು ಆತ್ಮಹತ್ಯೆ ಮಾಡಿಕೊಂಡರು. ಇದು ವಿಷಾದಕರ. ಆ ನೇಕಾರರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ನೇಕಾರ ಸಮ್ಮಾನ್ ಯೋಜನೆ ಸಮರ್ಪಕವಾಗಿ ಜಾರಿಯಾಗಿದೆ. ಜವಳಿ ಪಾರ್ಕ್‌ ಸ್ಥಾಪನೆಗೂ ಒತ್ತು ನೀಡುತ್ತೇವೆ. ಹೊಸ ಜವಳಿ ನೀತಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜವಳಿ ಕಾರ್ಖಾನೆ ಸ್ಥಾಪನೆಗೆ ₹ 40 ಕೋಟಿವರೆಗೆ ಸಾಲ ಸಿಗಲಿದೆ. ಜತೆಗೆ ವರ್ಗವಾರು ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇಂತಹ ಯೋಜನೆ ಬೇರೆ ರಾಜ್ಯಗಳಲ್ಲಿ ಇಲ್ಲ’ ಎಂದು ವಿವರಿಸಿದರು.

‘ಕೈಮಗ್ಗ ಮತ್ತು ವಿದ್ಯುತ್ ಕೈಮಗ್ಗಗಳಿಂದ ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆ ಕಲ್ಪಿಸಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೈಮಗ್ಗಗಳು ಸ್ಥಾಪನೆಯಾಗಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ವಿದ್ಯುತ್ ಕೈಮಗ್ಗದವರಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿ ಸಕಾಲಕ್ಕೆ ದೊರೆಯಬೇಕು’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಶಾಸಕಿ ಎಂ.ರೂಪಕಲಾ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ, ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT