ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ವಿಶೇಷ ಪೂಜೆ– ಹೋಮ

ರಾಮಮಂದಿರಕ್ಕೆ ಭೂಮಿ ಪೂಜೆ: ಕೇಸರಿ ಭಗವ ಧ್ವಜಗಳ ಹಾರಾಟ
Last Updated 5 ಆಗಸ್ಟ್ 2020, 13:36 IST
ಅಕ್ಷರ ಗಾತ್ರ

ಕೋಲಾರ: ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಭೂಮಿ ಪೂಜೆಯ ಸವಿ ನೆನಪಿಗಾಗಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ನಗರದ ದೇವಸ್ಥಾನಗಳಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ಹೋಮ ಹಮ್ಮಿಕೊಂಡಿದ್ದವು.

ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಧರ್ಮ ರಕ್ಷಣೆಯ ಹೋರಾಟದಲ್ಲಿ ಪ್ರಾಣತೆತ್ತ ಕುಟುಂಬಗಳ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ದೇವಾಲಯಗಳು ಮತ್ತು ಬಿಜೆಪಿ ಮುಖಂಡರ ಮನೆಗಳ ಮೇಲೆ ಕೇಸರಿ ಭಗವ ಧ್ವಜ ಹಾರಡಿತು. ಸಂಘಟನೆಗಳ ಸದಸ್ಯರು ತಮ್ಮ ಮನೆಗಳ ಮುಂಭಾಗ ಸಂಜೆ ದೀಪ ಬೆಳಗಿಸಿ ಸಂಭ್ರಮಿಸಿದರು. ಅಲ್ಲದೇ, ಭಗವ ಧ್ವಜ ಹಿಡಿದು ಜೈಕಾರ ಹಾಕಿದರು.

ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಬಜರಂಗದಳದ ಕಾರ್ಯಕರ್ತರು ಹನುಮ ದೇವರಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಕೆಇಬಿ ಗಣಪತಿ ದೇವಾಲಯದಲ್ಲಿ ಶ್ರೀರಾಮ ನಾಮ ತಾರಕ ಹೋಮ, ವಿಶೇಷ ಪೂಜೆ, ವಿನಾಯಕನಿಗೆ ಅಭಿಷೇಕ ನಡೆಸಲಾಯಿತು.

ಲಡ್ಡು ವಿತರಣೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಶ್ರೀರಾಮ ದೇವರಗುಡಿ ಬೀದಿಯ ದೇವಾಲಯದಲ್ಲಿ ಲಡ್ಡು ವಿತರಿಸಲಾಯಿತು. ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ನಡೆಸಲಾಯಿತು. ಟೇಕಲ್ ರಸ್ತೆಯ ಸಪ್ಪಲಮ್ಮ ದೇವಾಲಯದ ಸಮೀಪ ಯುವಕರು ಶ್ರೀರಾಮನ ಕಟೌಟ್ ನಿಲ್ಲಿಸಿ ಪೂಜೆ ಸಲ್ಲಿಸಿ ಸಿಹಿ ಹಂಚಿದರು.

ಬಿಗಿ ಬಂದೋಬಸ್ತ್: ರಾಮಮಂದಿರಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಯು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಎಲ್ಲೆಡೆ ಮೆರವಣಿಗೆ, ವಿಜಯೋತ್ಸವ ನಿರ್ಬಂಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯದಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದರು. ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT