ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ಯೋಜನೆಯ ತಡೆಯಾಜ್ಞೆ ತೆರವು: ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಕೆ

Last Updated 5 ಏಪ್ರಿಲ್ 2019, 13:11 IST
ಅಕ್ಷರ ಗಾತ್ರ

ಕೋಲಾರ: ಕೆ.ಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಇಲ್ಲಿ ಶುಕ್ರವಾರ 1,001 ತೆಂಗಿನಕಾಯಿ ಒಡೆದು ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ ಸಂಗತಿ ತಿಳಿದ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಶ್ರೀನಿವಾಸಗೌಡರ ಜತೆ ಕೋಲಾರಮ್ಮ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಈಡುಗಾಯಿ ಒಡೆದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಪರ ಜೈಕಾರ ಕೂಗಿದರು.

‘ಕೆ.ಸಿ ವ್ಯಾಲಿ ಯೋಜನೆ ಜಾರಿ ಹಿಂದೆ ರಮೇಶ್‌ಕುಮಾರ್‌, ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ರ ಶ್ರಮವಿದೆ. ಆದರೆ, ಸಂಸದ ಮುನಿಯಪ್ಪರ ಪಾತ್ರವಿಲ್ಲ. ಚುನಾವಣೆ ಬಂದಿದೆ ಎಂದು ಸುಳ್ಳು ಹೇಳುವುದು ಸರಿಯಲ್ಲ’ ಎಂದು ಶ್ರೀನಿವಾಸಗೌಡ ಕಿಡಿಕಾರಿದರು.

‘ಮುನಿಯಪ್ಪ ಕೆ.ಸಿ ವ್ಯಾಲಿ ಯೋಜನೆಗೆ ತಡೆಯೊಡ್ಡಲು ನಡೆಸಿದ ಪ್ರಯತ್ನವೆಲ್ಲಾ ವಿಫಲವಾಯಿತು. ಅವರು ಯೋಜನೆ ಪರವಾಗಿ ಏನೂ ಮಾಡಿಲ್ಲ. ಜಿಲ್ಲೆಗೆ ಕುಡಿಯುವ ನೀರು ಮತ್ತು ಕೆರೆಗಳನ್ನು ತುಂಬಿಸುವ ಕಾರ್ಯಕ್ರಮ ಬಂದಿರುವುದಕ್ಕೆ ಮೂಲ ಕಾರಣ ರಮೇಶ್‌ಕುಮಾರ್‌. ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿರುವುದಕ್ಕೆ ಸಂತಸವಾಗಿದೆ’ ಎಂದರು.

‘ತೆಂಗಿನಕಾಯಿ ಒಡೆಯುವುದು ಮೂಢ ನಂಬಿಕೆಯಲ್ಲ. ಹಿಂದೂಗಳು ಹೀಗೆ ಮಾಡುತ್ತಾರೆಂದು ನಾನು ಭಾಗವಹಿಸಿದ್ದೇನೆ. ಮಸೀದಿಗೆ ಹೋದರೆ ನಮಾಜ್ ಮಾಡುತ್ತೇನೆ. ಇದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದರು.

₹ 500 ಕೋಟಿ ನಷ್ಟ: ‘ಕೆ.ಸಿ ವ್ಯಾಲಿ ಯೋಜನೆ ವಿಚಾರವಾಗಿ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ 5 ತಿಂಗಳಿಂದ ಮಾಡಿದ ಕುತಂತ್ರಕ್ಕೆ ಜಿಲ್ಲೆಗೆ ₹ 500 ಕೋಟಿ ನಷ್ಟವಾಗಿದೆ.. ಇದರಿಂದ ಅವರಿಗೆ ಏನು ಲಾಭವಾಯಿತೋ ಗೊತ್ತಿಲ್ಲ. ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

‘ರೈತರಿಗೆ ತೊಂದರೆ ಕೊಟ್ಟರೆ, ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದರೆ ನಗರ ದೇವತೆ ಕೋಲಾರಮ್ಮನೇ ಶಿಕ್ಷೆ ಕೊಡುತ್ತಾಳೆ. ಆ ನಂಬಿಕೆ ಮೇಲೆಯೇ ನಾವು ತೆಂಗಿನಕಾಯಿ ಒಡೆದಿದ್ದೇವೆ. ಹಲವು ವಿಚಾರದಲ್ಲಿ ನಾನು ಹೋರಾಟಗಾರರನ್ನು ಬೆಂಬಲಿಸಿದ್ದೇನೆ. ಅಂತಹ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಲಿ’ ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ದಯಾನಂದ್, ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ, ರಾಜಪ್ಪ, ನಾಗೇಶ್, ರೈತ ಸಂಘ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಉಮಾಗೌಡ, ಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT