ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ | ಮಾವು ವೈಜ್ಞಾನಿಕ ಕೊಯಿಲಿಗೆ ಸಲಹೆ

ಅವೈಜ್ಞಾನಿಕ ಕಾಯಿ ಕೊಯಿಲಿನಿಂದ ಬೆಳೆಗಾರರಿಗೆ ನಷ್ಟ; ವಿಜ್ಞಾನಿಗಳಿಂದ ಸಲಹೆ
Last Updated 17 ಮೇ 2020, 20:00 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಮಾವಿನ ಕಾಯಿ ಬೆಳೆಯಲು ತೆಗೆದುಕೊಳ್ಳುವ ಎಚ್ಚರಕೆಯನ್ನು ಕೊಯ್ಲು ಮಾಡಲು ತೆಗೆದುಕೊಳ್ಳುವುದಿಲ್ಲ ಎಂಬ ಆಪಾದನೆ ಸಾಮಾನ್ಯವಾಗಿ ಕೇಳಿಬರುತ್ತದೆ. ಅವೈಜ್ಞಾನಿಕ ಕಾಯಿ ಕೊಯಿಲಿನಿಂದ ಸೂಕ್ತ ಬೆಲೆ ಸಿಗದೆ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗುತ್ತಿದೆ.

ಹಿಂದೆ ಮಾವಿನ ಕೊಯ್ಲನ್ನು, ಮಾವು ಇಳಿಸುವುದು ಎಂದು ಕರೆಯಲಾಗುತ್ತಿತ್ತು. ಒಬ್ಬರು ಮರ ಹತ್ತಿ ಕಾಯಿ ಕಿತ್ತು ಹಾಕಿದರೆ, ಇನ್ನೊಬ್ಬರು ಕೈಯ್ಯಲ್ಲಿ ಹಿಡಿದು ನಿಧಾನವಾಗಿ ನೆಲದ ಮೇಲೆ ಬಿಡುತ್ತಿದ್ದರು. ಕೋಳಿ ಮೊಟ್ಟೆಯನ್ನು ನಿರ್ವಹಣೆ ಮಾಡುವಷ್ಟೇ ಪ್ರಾಮುಖ್ಯತೆಯನ್ನು ಮಾವಿನ ಕಾಯಿ ನಿರ್ವಹಣೆಗೆ ನೀಡುತ್ತಿದ್ದರು. ಖರೀದಿಸಿದ ಎಲ್ಲ ಕಾಯಿಯೂ ಹಣ್ಣಾಗುತ್ತಿತ್ತು.

ಬದಲಾದ ಪರಿಸ್ಥಿತಿಯಲ್ಲಿ ಮಾವನ್ನು ಬೆಳೆಯುವ ವಿಸ್ತೀರ್ಣ ಹೆಚ್ಚಿದಂತೆ, ಕಾಯಿ ಕೀಳಲು ಕೃಷಿ ಕಾರ್ಮಿಕರ ಕೊರತೆ ಕಾಣಿಸಿಕೊಂಡಿತು. ಇದರಿಂದ ಕಾಯಿ ಇಳಿಸುವುದಕ್ಕೆ ಬದಲಾಗಿ ಉದುರಿಸುವಿಕೆ ಪ್ರಾರಂಭವಾಯಿತು. ನೆಲಕ್ಕೆ ಬಿದ್ದ ಕಾಯಿಯ ಸ್ವಲ್ಪ ಭಾಗ ಕೊಳೆಯುವುದರಿಂದ, ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿತ್ತು. ಅದು ಕಾಯಿಯ ಬೆಲೆ ಕುಸಿಯಲು ಕಾರಣವಾಯಿತು.

‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬ ಗಾದೆಯಂತೆ ಈಗ ಮಾವು ಬೆಳೆಗಾರರು ಎಚ್ಚೆತ್ತುಕೊಂಡಿದ್ದಾರೆ. ವೈಜ್ಞಾನಿಕ ಕೊಯಿಲಿಗೆ ಒಲವು ತೋರಿದ್ದಾರೆ. ಕಾಯಿಯನ್ನು ನೇರವಾಗಿ ಟ್ರ್ಯಾಕ್ಟರ್‌ಗೆ ತುಂಬುವ ಬದಲು ಕ್ರೇಟ್ಸ್‌ಗೆ ತುಂಬಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಕೆಲವರು ಒಂದು ಅಂಗುಲದಷ್ಟು ತೊಟ್ಟು ಬಿಟ್ಟು ಕಾಯಿ ಕಟಾವು ಮಾಡುತ್ತಿದ್ದಾರೆ. ಸೊನೆ ಕಾಯಿಗೆ ಅಂಟದಂತೆ ಎಚ್ಚರ ವಹಿಸುತ್ತಿದ್ದಾರೆ.

ಎತ್ತರವಾದ ಮರಗಳಲ್ಲಿನ ಕಾಯಿ ಕೀಳಲು ಹಿಂದೆ ಕೀಳು ಬುಟ್ಟಿಯನ್ನು ಬಳಸಲಾಗುತ್ತಿತ್ತು. ಈಗ ಸುಧಾರಿತ ಮಾವು ಕೊಯ್ಲು ಸಾಧನ ಬಳಕೆಗೆ ಬಂದಿದೆ. ಬುಟ್ಟಿಗೆ ಬ್ಲೇಡ್‌ ಅಳವಡಿಸಿರುವುದು ವಿಶೇಷ. ಈ ಸಾಧನ ಬಳಿಸಿ ಗಂಟೆಯೊಂದಕ್ಕೆ ಸುಮಾರು 100 ಕೆ.ಜಿ. ಕಾಯಿ ಕಟಾವು ಮಾಡಬಹುದಾಗಿದೆ.

ಮಾವಿನ ಕಾಯಿಯನ್ನು ತೊಟ್ಟು ಸಮೇತ ಕೊಯಿಲು ಮಾಡುವುದರಿಂದ ಸೊನೆಯಿಂದ ಮುಕ್ತಗೊಳಿಸಿ, ರೋಗಾಣು ಬಾಧೆ ತಪ್ಪಿಸಬಹುದು. ಸೊನೆ ಅಂಟಿದ್ದಲ್ಲಿ ನೀರಲ್ಲಿ ತೊಳೆಯಬೇಕು. ನಂತರ ಬಿಸಿ ನೀರಿನಲ್ಲಿ 5 ನಿಮಿಷಗಳ ಕಾಲ ಮುಳುಗಿಸಿ, ಬಟ್ಟೆಯಿಂದ ಒರೆಸಬೇಕು. ಕಾಯಿಯನ್ನು ಎಥಿಲೀನ್‌ ಅನಿಲಕ್ಕೆ ಒಡ್ಡುವುದರಿಂದ ಎಲ್ಲಾ ಕಾಯಿಗಳು ಒಂದೇ ಸಲ ಹಣ್ಣಾಗುತ್ತವೆ ಎಂದು ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಕೆ.ಎಸ್‌.ನಾಗರಾಜ್‌ ತಿಳಿಸಿದ್ದಾರೆ.

ಶೇ.7ರಷ್ಟು ಪ್ಯಾರಾಫಿನ್‌ ಮೇಣದ ದ್ರಾವಣದೊಂದಿಗೆ ಹಣ್ಣುಗಳಿಗೆ ಲೇಪನ ಮಾಡುವುದರಿಂದ ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ. ರಫ್ತು ಮಾಡಲು ಹಣ್ಣಿನ ತೂಕದ ಆಧಾರದ ಮೇಲೆ ನಿರ್ವಹಣೆ ಮಾಡಬೇಕು. ನೂಲುಯುಕ್ತ ಕಾಗದ ರಟ್ಟಿನ ಪೆಟ್ಟಿಗೆಗಳಲ್ಲಿ ಕ್ರಮವಾಗಿ ತುಂಬಿ ರಫ್ತು ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳನ್ನು ಸಂಪರ್ಕಿಸಲು ಕೋರಿದ್ದಾರೆ.

ಕಡಿಮೆ ತಾಪಮಾನದಲ್ಲಿ ಶೇಖರಣೆ
ಬಾದಾಮಿ ತಳಿಯ ಮಾವಿನಲ್ಲಿ ಸ್ಪಂಜು ಅಂಗಾಂಶ ಎಂಬ ಶಾರೀರಿಕ ತೊಂದರೆ ಹೆಚ್ಚಾಗಿ ಕಂಡುಬರುತ್ತಿದೆ. ‘ಈ ಸಮಸ್ಯೆಯಿಂದ ಮಾವನ್ನು ರಕ್ಷಿಸಲು ದೋರೆ ಕಾಯಿಯನ್ನು ಕಟಾವು ಮಾಡಬೇಕು. ಕಟಾವಾದ ಕಾಯಿ ನೇರವಾಗಿ ಸೂರ್ಯನ ಝಳಕ್ಕೆ ಸಿಗದಂತೆ ನೋಡಿಕೊಳ್ಳಬೇಕು. 10 ರಿಂದ 18 ಗಂಟೆಗಳ ಕಾಲ ಕಡಿಮೆ ತಾಪಮಾನಕ್ಕೆ ಒಡ್ಡಬೇಕು’ ಎಂದು ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಕೆ.ಎಸ್‌.ನಾಗರಾಜ್‌ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT