ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಎಸ್ಸೆಸ್ಸೆಲ್ಸಿ ಮೌಲ್ಯಮಾಪನ: ಗೈರಾದರೆ ಶಿಸ್ತುಕ್ರಮ

ಲೋಪಕ್ಕೆ ಅವಕಾಶ ಬೇಡ: ಡಿಡಿಪಿಐ ರತ್ನಯ್ಯ ಖಡಕ್‌ ಎಚ್ಚರಿಕೆ
Last Updated 10 ಜುಲೈ 2020, 12:55 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆಗೆ ಬಾರದ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು. ಸಕಾರಣವಿಲ್ಲದೆ ಮೌಲ್ಯಮಾಪನಕ್ಕೆ ಗೈರಾಗುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಜಂಟಿ ಹಾಗೂ ಉಪ ಮುಖ್ಯ ಮೌಲ್ಯಮಾಪಕರ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಜಿಲ್ಲೆಯ ಘನತೆಗೆ ಧಕ್ಕೆಯಾಗದಂತೆ ಮೌಲ್ಯಮಾಪನಕ್ಕೆ ಸಿದ್ಧತೆ ನಡೆಸಿ’ ಎಂದು ಜಂಟಿ ಹಾಗೂ ಉಪ ಮುಖ್ಯ ಮೌಲ್ಯಮಾಪಕರಿಗೆ ಸೂಚಿಸಿದರು.

‘ಮಾಧ್ಯಮ, ಭಾಷಾವಾರು ಉತ್ತರ ಪತ್ರಿಕೆಗಳ ಪ್ಯಾಕೆಟ್‌ಗೆ ಕ್ರಮಾಂಕ ನೀಡಿ ಡಿ–ಕೋಡಿಂಗ್ ನಡೆಸಿ. ಡಿ–ಕೋಡಿಂಗ್ ನಂತರ ಜುಲೈ 13ರಿಂದ ಮೌಲ್ಯಮಾಪನ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತದೆ. ಮೌಲ್ಯಮಾಪಕರು ಸಮಯ ಪ್ರಜ್ಞೆಯಿಂದ ವರ್ತಿಸಿ. ಪ್ರತಿನಿತ್ಯ ನಿಗದಿಪಡಿಸಿದ ಕಾರ್ಯ ಪೂರ್ಣಗೊಳಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 6 ಮೌಲ್ಯಮಾಪನ ಕೇಂದ್ರಗಳಿದ್ದು, ಪ್ರತಿ ವಿಷಯಕ್ಕೂ ಒಂದೊಂದು ಕೇಂದ್ರದಲ್ಲಿ ಕಾರ್ಯ ನಡೆಯುತ್ತದೆ. ಜಿಲ್ಲಾ ಕೇಂದ್ರದ ನವ ನಳಂದ ಶಾಲೆಯಲ್ಲಿ ಕನ್ನಡ, ಮಹಿಳಾ ಸಮಾಜದಲ್ಲಿ ಇಂಗ್ಲಿಷ್‌, ಸೈನಿಕ್ ಪಬ್ಲಿಕ್ ಶಾಲೆಯಲ್ಲಿ ಹಿಂದಿ, ಸುಗುಣಾ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಗಣಿತ, ಸೆಂಟ್‍ ಆನ್ಸ್‌ ಶಾಲೆಯಲ್ಲಿ ವಿಜ್ಞಾನ ಮತ್ತು ಚಿನ್ಮಯ ವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತದೆ’ ಎಂದು ವಿವರಿಸಿದರು.

20 ಪತ್ರಿಕೆ ಮೌಲ್ಯಮಾಪನ: ‘ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಶಿಕ್ಷಕರು ಅಂತರ ಕಾಪಾಡಿಕೊಂಡು ಮೌಲ್ಯಮಾಪನ ನಡೆಸಬೇಕು. ಒಂದು ದಿನಕ್ಕೆ 20 ಉತ್ತರ ಪತ್ರಿಕೆ ಮಾತ್ರ ಮೌಲ್ಯಮಾಪನ ಮಾಡಲು ಅವಕಾಶವಿದೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು.

‘ಮೌಲ್ಯಮಾಪನ ಕೇಂದ್ರದ ಕೊಠಡಿಗಳಿಗೆ ಈಗಾಗಲೇ ಸ್ಯಾನಿಟೈಸ್ ಮಾಡಿಸಲಾಗಿದೆ. ಮೌಲ್ಯಮಾಪಕರು ಕೇಂದ್ರಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿನಿತ್ಯ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು. ಸುರಕ್ಷತೆ ದೃಷ್ಟಿಯಿಂದ ಉತ್ತರ ಪತ್ರಿಕೆ ಪಡೆಯಲು ಭದ್ರತಾ ಕೊಠಡಿಗೆ ಉಪ ಮುಖ್ಯ ಮೌಲ್ಯಮಾಪಕರು ಮಾತ್ರ ಹೋಗಬೇಕು’ ಎಂದು ತಿಳಿಸಿದರು.

ಸಹಕರಿಸಿ: ‘ಮಕ್ಕಳಿಗೆ ಅನ್ಯಾಯವಾಗದಂತೆ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ. ಕೇಂದ್ರದಲ್ಲಿ ಅನಗತ್ಯವಾಗಿ ಗುಂಪುಗೂಡಬೇಡಿ. ಮೌಲ್ಯಮಾಪನದ ನಂತರ ಅಂಕ ಎಣಿಕೆ ಸರಿಯಾಗಿ ಮಾಡಿ. ಜಂಟಿ ಮೌಲ್ಯಮಾಪಕರೊಂದಿಗೆ ಸಹಕರಿಸಿ ವಿವೇಚನೆಯಿಂದ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

ಮೌಲ್ಯಮಾಪನ ಕೇಂದ್ರದ ಜಂಟಿ ಮುಖ್ಯ ಪರೀಕ್ಷಕ ಮಂಜುನಾಥ್, ಶಿಕ್ಷಕರಾದ ರಾಜಗೋಪಾಲ್, ಹೇಮಾರೆಡ್ಡಿ, ಗಾಯತ್ರಿ, ಶ್ರೀಧರ್, ಗೋಪಿನಾಥ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT