ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಜೀವನದ ಬುನಾದಿ- ನಾಗೇಂದ್ರಪ್ರಸಾದ್

ಸಂವಾದದಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಕಿವಿಮಾತು
Last Updated 9 ಏಪ್ರಿಲ್ 2021, 15:22 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಕೆಲವೇ ದಿನಗಳು ಬಾಕಿಯಿದ್ದು, ಆರೋಗ್ಯ ರಕ್ಷಣೆಗೆ ಒತ್ತು ನೀಡಿ. ಶ್ರದ್ಧೆ ಮತ್ತು ಏಕಾಗ್ರತೆಯಿಂದ ಅಭ್ಯಾಸ ಮುಂದುವರಿಸಿ. ಕಾಲಹರಣ ಮಾಡಬೇಡಿ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಕೆಂಬೋಡಿಯಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿ, ‘ಎಸ್ಸೆಸ್ಸೆಲ್ಸಿಯು ಶೈಕ್ಷಣಿಕ ಜೀವನದ ಬುನಾದಿ. ವಿದ್ಯಾರ್ಥಿಗಳ ಈ ಹಂತದಲ್ಲಿ ಕಲಿಕೆಯಲ್ಲಿ ಆಸಕ್ತಿ ವಹಿಸಿ ಶ್ರದ್ಧೆಯಿಂದ ಓದಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಭಯ ಬೇಕಿಲ್ಲ. ಓದಿದವರಿಗೆ ಆತ್ಮಸ್ಥೈರ್ಯ ಜತೆಯಲ್ಲೇ ಇರುತ್ತದೆ. ಕೋವಿಡ್ ಆತಂಕದ ನಡುವೆಯೂ ಹಿಂದಿನ ವರ್ಷ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದೇವೆ. ಈ ಬಾರಿ ಯಾವುದೇ ಸಮಸ್ಯೆಯಾಗದಂತೆ ಪರೀಕ್ಷೆ ನಡೆಸುತ್ತೇವೆ. ಪ್ರತಿ ಪಠ್ಯ ವಿಷಯಕ್ಕೂ ಆದ್ಯತೆ ನೀಡಿ ಓದಿ. ಇಲಾಖೆ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಮುಂದಿನ ವಾರ ನನ್ನನ್ನೊಮ್ಮೆ ಗಮನಿಸಿ ಮಾದರಿ ಪಶ್ನೋತ್ತರ ಕೋಠಿ ಒದಗಿಸುತ್ತೇವೆ. 6 ಸೆಟ್ ಮಾದರಿ ಪ್ರಶ್ನೆಪತ್ರಿಕೆಗಳು ಸಿಗಲಿದ್ದು, ಇದರ ಸದುಪಯೋಗ ಪಡೆಯಿರಿ’ ಎಂದು ಸಲಹೆ ನೀಡಿದರು.

‘ಈ ಬಾರಿ ಪ್ರಶ್ನೆಪತ್ರಿಕೆ ಸುಲಭವಾಗಿರುತ್ತದೆ. ಶೇ 10ರಷ್ಟು ಮಾತ್ರ ಕಠಿಣತೆ ಇರುತ್ತದೆ. ಉತ್ತಮ ಅಂಕ ಸಾಧನೆಗೆ ಇದು ಉತ್ತಮ ಅವಕಾಶ. ಆರೋಗ್ಯವಂತ ಶರೀರದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ. ಕೋವಿಡ್‌ ವಿಷಯದಲ್ಲಿ ನಿರ್ಲಕ್ಷ್ಯತೆ ಬೇಡ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಅಂತರ ಕಾಪಾಡಿಕೊಳ್ಳಿ’ ಎಂದರು.

ಆತ್ಮವಿಶ್ವಾಸ ಮುಖ್ಯ: ‘ಪರೀಕ್ಷೆಯಲ್ಲಿ ಬರವಣಿಗೆ ಸುಂದರವಾಗಿರಬೇಕು. ಯಾವುದೇ ಕೆಲಸಕ್ಕೆ ಆತ್ಮವಿಶ್ವಾಸ ಬಹಳ ಮುಖ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಆತ್ಮವಿಶ್ವಾಸವು ನಿರ್ಣಾಯಕ ಪಾತ್ರ ವಹಿಸುತ್ತದೆ. ಜತೆಗೆ ಪರೀಕ್ಷಾ ಭಯ ಹೋಗಲಾಡಿಸುತ್ತದೆ’ ಎಂದು ಹೇಳಿದರು.

‘ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ರೂಢಿಸಿಕೊಳ್ಳಿ. ಉತ್ತೀರ್ಣನಾಗುತ್ತೇವೆ ಎಂಬ ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿ. ಶಿಕ್ಷಕರು ಮಕ್ಕಳ ಕಲಿಕೆಯ ದೃಢೀಕರಣಕ್ಕೆ ಗಮನ ನೀಡಬೇಕು. ಪಠ್ಯ ಪುಸ್ತಕ ಅಧ್ಯಯನ ಮಾಡುವುದರಿಂದ ಪರೀಕ್ಷೆಯಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಕಠಿಣ ವಿಷಯಗಳಾದ ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ವಿಷಯಗಳ ಓದಿಗೆ ಹೆಚ್ಚಿನ ಒತ್ತು ನೀಡಿ. ನಿರಂತರ ಅಭ್ಯಾಸದಿಂದ ಈ ವಿಷಯಗಳು ಸುಲಭವೆನಿಸುತ್ತವೆ. ಗಣಿತ ವಿಷಯಕ್ಕೆ ಅಭ್ಯಾಸ ಬಹಳ ಮುಖ್ಯ. ಸೂತ್ರಗಳನ್ನು ನೆನಪಿಸಿಕೊಂಡು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡಿ. ಪ್ರತಿ ಅಭ್ಯಾಸದಲ್ಲಿರುವ ಸಮಸ್ಯೆಗಳನ್ನು ಬರೆದುಕೊಂಡು ಸ್ವತಃ ಬಿಡಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ’ ಎಂದರು.

ಜನತಾ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಎಸ್.ರವಿ, ಶಿಕ್ಷಕರಾದ ಮಲ್ಲಿಕಾರ್ಜುನ್, ನಾರಾಯಣಸ್ವಾಮಿ, ರಾಜಣ್ಣ, ವೆಂಕಟೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT