ಬುಧವಾರ, ಜುಲೈ 6, 2022
21 °C
ಅರ್ಜಿ ಸಲ್ಲಿಕೆಗೆ 30 ಕಡೆ ದಿನ

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಪ್ರತಿಗೆ ಅವಕಾಶ: ನಾಗೇಂದ್ರ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮರು ಎಣಿಕೆಗೆ ಹಾಗೂ ಮರು ಮೌಲ್ಯಮಾಪನಕ್ಕೆ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಾರಣಾಂತರದಿಂದ ಕಡಿಮೆ ಅಂಕ ಬಂದು ನಂತರ ಸರಿಹೋಗಿರುವ ಅನೇಕ ಪ್ರಕರಣಗಳಿವೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವಿದ್ದರೆ ತಪ್ಪದೇ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‍ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಆನ್‍ಲೈನ್‍ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಪ್‍ಲೈನ್ ಚಲನ್ ಡೌನ್‍ಲೋಡ್ ಮಾಡಿಕೊಂಡು ಶುಲ್ಕವನ್ನು ಬ್ಯಾಂಕಿಗೆ ಪಾವತಿಸಲು ಮೇ 31ರವರೆಗೂ ಕಾಲಾವಕಾಶ ನೀಡಲಾಗಿದೆ. ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಮರುಎಣಿಕೆಗೆ ಅರ್ಜಿಯನ್ನು ಮೇ 24ರಿಂದಲೇ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಜೂ.6 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನೇರವಾಗಿ ಮರು ಎಣಿಕೆಗೆ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಮರು ಏಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆದು ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಖಚಿತಪಡಿಸಿಕೊಂಡ ಮರು ಎಣಿಕೆಗೆ ಅರ್ಜಿ ಸಲ್ಲಿಸಬೇಕು. ಮರು ಎಣಿಕೆಗೆ ಪ್ರತ್ಯೇಕ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಒಂದು ವಿಷಯಕ್ಕೆ ₹ 410, ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ ₹ 810 ಶುಲ್ಕವಿದೆ. ಆಫ್‍ಲೈನ್ ಮೂಲಕ ಶುಲ್ಕವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಾವತಿಸಿದರೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ, ಇತರೆ ಬ್ಯಾಂಕ್‌ಗಳಲ್ಲಿ ಸ್ಕ್ಯಾನ್ ಪ್ರತಿ ಒಂದು ವಿಷಯಕ್ಕೆ ₹ 420, ಮರು ಮೌಲ್ಯಮಾಪನ ಒಂದು ವಿಷಯಕ್ಕೆ ₹ 820 ಆಗುತ್ತದೆ ಎಂದು ವಿವರ ನೀಡಿದ್ದಾರೆ.

ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಯ್ಯಾನ್ ಮಾಡಿ ಮಂಡಳಿಯ ಜಾಲತಾಣದಲ್ಲಿ ಅಪ್‍ಲೋಡ್ ಮಾಡಲಾಗುವುದು. ಈ ಮಾಹಿತಿಯನ್ನು ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು. ನಂತರ ವಿದ್ಯಾರ್ಥಿಗಳು ಮಂಡಳಿಯ ಜಾಲತಾಣದಿಂದ ಸ್ಕ್ಯಾನ್ ಪ್ರತಿ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.