ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರದ ಗ್ರಂಥಾಲಯಗಳಲ್ಲಿ ಸಿಬ್ಬಂದಿ ಕೊರತೆ: ಅಲ್ಲಿ ಮೂರು ದಿನ; ಇಲ್ಲಿ ಮೂರು ದಿನ!

ಜಿಲ್ಲಾ ಗ್ರಂಥಾಲಯ ಇಲಾಖೆಗೆ ಮಂಜೂರಾಗಿರುವುದು 23 ಹುದ್ದೆ; ಖಾಲಿ ಇರುವುದು 17 ಹುದ್ದೆ, ಪೂರ್ಣಾವಧಿ ಉಪನಿರ್ದೇಶಕರೂ ಇಲ್ಲ
Published : 25 ಆಗಸ್ಟ್ 2024, 5:41 IST
Last Updated : 25 ಆಗಸ್ಟ್ 2024, 6:43 IST
ಫಾಲೋ ಮಾಡಿ
Comments

ಕೋಲಾರ: ನಗರಸಭೆ ಹಾಗೂ ಪುರಸಭೆಗಳಿಂದ ಬರಬೇಕಿರುವ ಸುಮಾರು ₹ 2.03 ಲಕ್ಷ ಸೆಸ್‌ ಬಾಕಿ ಇದ್ದು, ಸರಿಯಾಗಿ ನಿರ್ವಹಣೆ ಇಲ್ಲದೆ ಈಗಾಗಲೇ ಸೊರಗಿರುವ ಜಿಲ್ಲೆಯ ಗ್ರಂಥಾಲಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ.

ಕೋಲಾರ ಜಿಲ್ಲಾ ಗ್ರಂಥಾಲಯಕ್ಕೆ ಪೂರ್ಣಾವಧಿ ಉಪನಿರ್ದೇಶಕರು ಇಲ್ಲ. ಸಿ.ಗಣೇಶ್‌ ಅವರು ಹೆಚ್ಚುವರಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೆಂಗಳೂರು ನಗರ ಜಿಲ್ಲೆಯ ಗ್ರಂಥಾಲಯದಲ್ಲಿ ಪ್ರಭಾರ ಉಪನಿರ್ದೇಶಕರಾಗಿದ್ದಾರೆ. ಅಲ್ಲಿ ಮೂರು ದಿನ ಕೆಲಸ, ಇಲ್ಲಿ ಮೂರು ದಿನ ಕೆಲಸ ಮಾಡಬೇಕಾದ ಪರಿಸ್ಥಿತಿ ನೆಲೆಸಿದೆ.

ಜಿಲ್ಲೆಗೆ ಸರ್ಕಾರದಿಂದ ಒಟ್ಟು 23 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆದರೆ, 17 ಹುದ್ದೆಗಳು ಖಾಲಿ ಇವೆ. ಇಡೀ ಜಿಲ್ಲೆಗೆ ಕೇವಲ 6 ಹುದ್ದೆ ಭರ್ತಿ ಮಾಡಲಾಗಿದೆ. ಇದರಿಂದ ಎರಡು ತಾಲ್ಲೂಕುಗಳ ಗ್ರಂಥಾಲಯಗಳನ್ನು ಒಬ್ಬರೇ ನಿರ್ವಹಿಸಬೇಕಾದ ಪರಿಸ್ಥಿತಿ ಬಂದಿದೆ. ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕು ಒಬ್ಬರು, ಮಾಲೂರು, ಬಂಗಾರಪೇಟೆ ತಾಲ್ಲೂಕು ಒಬ್ಬರು ನಿರ್ವಹಣೆ ಮಾಡುತ್ತಿದ್ದಾರೆ.

ಈ ದುಸ್ಥಿತಿಗೆ ಜಿಲ್ಲೆಯ ಸಾಹಿತಿಗಳು, ಗ್ರಂಥಾಲಯ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವಿಷ್ಯ ರೂಪಿಸಬೇಕಾದ ಗ್ರಂಥಾಲಯಗಳ ಬಗ್ಗೆ ಸರ್ಕಾರದ ಈ ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲೆಯ ಎರಡು ನಗರಸಭೆ ಹಾಗೂ ಮೂರು ಪುರಸಭೆಗಳು ಐದು ವರ್ಷಗಳಿಂದ ಸೆಸ್‌ ಬಾಕಿ ಉಳಿಸಿಕೊಂಡಿವೆ. ಇದರಿಂದ ಗ್ರಂಥಾಲಯಗಳ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ ಹೊಸ ಕಟ್ಟಡ ನಿರ್ಮಾಣ ಹಾಗೂ ಸಂಚಾರ ಗ್ರಂಥಾಲಯ ವಾಹನ ಖರೀದಿ ಸಾಧ್ಯವಾಗುತ್ತಿಲ್ಲ. ವಿದ್ಯುತ್‌, ನೀರಿನ ಶುಲ್ಕ ಪಾವತಿಗೂ ಸ್ಥಳೀಯ ಸಂಸ್ಥೆಗಳ ಹಣದ ಮೇಲೆ ಅವಲಂಬಿತವಾಗಿದೆ. ಕೆಜಿಎಫ್‌ ನಗರಸಭೆಯೂ ಕರ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಪ್ರತ್ಯೇಕ ಕೇಂದ್ರವಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯದಡಿ ಬರುವುದಿಲ್ಲ.

‘ಎರಡೂ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಎಲ್ಲಾ ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇನೆ’ ಎಂದು ಗಣೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಒಟ್ಟು 181 ಗ್ರಂಥಾಲಯಗಳಿದ್ದು, ಅವುಗಳಲ್ಲಿ ಗ್ರಂಥಾಲಯ ಇಲಾಖೆಯಡಿ 25 ಘಟಕಗಳಿವೆ. ಇನ್ನುಳಿದ 156 ಗ್ರಂಥಾಲಯಗಳು ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿವೆ. ಗ್ರಂಥಾಲಯ ಇಲಾಖೆಯಿಂದ ಜಿಲ್ಲೆಯಲ್ಲಿ 5 ಸ್ವಂತ ಕಟ್ಟಡ, 3 ಬಾಡಿಗೆ ಕಟ್ಟಡ ಹಾಗೂ 17 ವಿವಿಧ ಇಲಾಖೆಗಳು ನೀಡಿದ ಉಚಿತ ಕಟ್ಟಡದಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ.

ಕೋಲಾರದ ಅಂಬೇಡ್ಕರ್‌ ನಗರ, ಬಂಗಾರಪೇಟೆಯ ರಾಮಲಿಂಗಪುರ (ಅಲೆಮಾರಿ ಗ್ರಂಥಾಲಯ), ಮುಳಬಾಗಿಲಿನ ಕೊಂಡಪಲ್ಲಿಯಲ್ಲಿ (ಅಲೆಮಾರಿ ಗ್ರಂಥಾಲಯ) ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಗ್ರಾಮಗಳಲ್ಲಿರುವ ಗ್ರಂಥಾಲಯವನ್ನು ಜಿಲ್ಲಾ ಪಂಚಾಯಿತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಸಿಬ್ಬಂದಿಗೆ ವೇತನವನ್ನೂ ಪಂಚಾಯಿತಿಯೇ ಪಾವತಿಸುತ್ತದೆ. ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳು ಬರುತ್ತವೆ. ಗ್ರಾಮ ಪಂಚಾಯಿತಿಗಳಿಂದ ಸಂಗ್ರಹವಾಗುವ ಸೆಸ್‌ಅನ್ನು ಆಯಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ.

ತೊಟ್ಲಿ ಗ್ರಾಮದಲ್ಲಿ ಕೃಷಿ ಇಲಾಖೆಯ ಕಟ್ಟಡದಲ್ಲಿರುವ ಗ್ರಂಥಾಲಯ. ಇದೇ ಕಟ್ಟಡದಲ್ಲಿ ಅಂಚೆ ಕಚೇರಿಯೂ ಇದೆ
ತೊಟ್ಲಿ ಗ್ರಾಮದಲ್ಲಿ ಕೃಷಿ ಇಲಾಖೆಯ ಕಟ್ಟಡದಲ್ಲಿರುವ ಗ್ರಂಥಾಲಯ. ಇದೇ ಕಟ್ಟಡದಲ್ಲಿ ಅಂಚೆ ಕಚೇರಿಯೂ ಇದೆ

Highlights - ಜಿಲ್ಲೆಯಲ್ಲಿ ಒಟ್ಟು 181 ಗ್ರಂಥಾಲಯ ಗ್ರಂಥಾಲಯ ಇಲಾಖೆಯಡಿ 25 ಘಟಕ ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿ 156 ಗ್ರಂಥಾಲಯಗಳು

ಸಿಬ್ಬಂದಿ ಕೊರತೆ ಇದ್ದು ನಿರ್ವಹಣೆಗೆ ತೊಂದರೆ ಆಗಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಚೆಗೆ ಇಬ್ಬರು ಸಿಬ್ಬಂದಿ ವರ್ಗಾವಣೆ ಮಾಡಿಸಿಕೊಂಡಿದ್ದು ಅವರ ಸ್ಥಳಕ್ಕೆ ಯಾರೂ ಬಂದಿಲ್ಲ
-ಸಿ.ಗಣೇಶ್‌ ಹೆಚ್ಚುವರಿ ಪ್ರಭಾರ ಉಪನಿರ್ದೇಶಕ ಜಿಲ್ಲಾ ಗ್ರಂಥಾಲಯ

ಗ್ರಾಮಗಳ ಗ್ರಂಥಾಲಯದಲ್ಲಿ ಸೌಲಭ್ಯ ಕೊರತೆ

ಗ್ರಾಮ ಪಂಚಾಯಿತಿಗಳ ಸುಪರ್ದಿಯಲ್ಲಿರುವ ಗ್ರಂಥಾಲಯಗಳಲ್ಲಿ ಮೂಲ ಸೌಲಭ್ಯ ಕೊರತೆ ಇದೆ. ಗ್ರಾಮದ ಹಿರಿಯರು ವಿದ್ಯಾರ್ಥಿಗಳು ಈ ಗ್ರಂಥಾಲಯ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಕುಡಿಯುವ ನೀರು ಶೌಚಾಲಯವೂ ಇರುವುದಿಲ್ಲ. ಕಟ್ಟಡ ಇಲ್ಲದೇ ಬೇರೆ ಇಲಾಖೆಗಳ ಸಣ್ಣಪುಟ್ಟ ಕಟ್ಟಡ ಅವಲಂಬಿಸಿದ್ದಾರೆ. ಸಿಬ್ಬಂದಿ ಕೊರತೆಯೂ ಇದೆ. ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದಲ್ಲಿರುವ ಗ್ರಂಥಾಲಯ ಕಟ್ಟಡವು ಕೃಷಿ ಇಲಾಖೆಗೆ ಸೇರಿದ್ದು.  ಜೊತೆಗೆ ಇದೇ ಕಟ್ಟಡದಲ್ಲಿ ಅಂಚೆ ಇಲಾಖೆಯ ಕಚೇರಿಯೂ ಇದೆ.  ‘ತೊಟ್ಲಿ ಗ್ರಾಮದಲ್ಲಿ ಗ್ರಂಥಾಲಯವು ಬೇರೆ ಇಲಾಖೆ ಕಟ್ಟಡದಲ್ಲಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಗ್ರಂಥಾಲಯಕ್ಕೆ ಹೊಸದಾಗಿ ಕಟ್ಟಡ ನಿರ್ಮಿಸಿಕೊಡಬೇಕು. ಜೊತೆಗೆ ಹೊಸ ಪುಸ್ತಕಗಳನ್ನು ತಂದಿಡಬೇಕು. ದಿನಪತ್ರಿಕೆಗಳನ್ನು ಸಂಗ್ರಹಿಸಿಡಬೇಕು’ ಎಂದು ತೊಟ್ಲಿ ಗ್ರಾಮಸ್ಥ ಟಿ.ವಿ.ರಮೇಶ್‌ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT