ಶುಕ್ರವಾರ, ಮಾರ್ಚ್ 5, 2021
30 °C
ಕ್ರಿಯಾಶೀಲ ಸೇನಾನಿ: ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ ಹೇಳಿಕೆ

ಸೇನೆಗೆ ಸುಭಾಷ್‌ಚಂದ್ರ ಬೋಸ್‌ ಬುನಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭಾರತ ದೇಶವು ಜಾಗತಿಕವಾಗಿ ಬಲಿಷ್ಠ ಸೇನಾ ಬಲ ಹೊಂದಲು ಸುಭಾಷ್‌ಚಂದ್ರ ಬೋಸ್ ಸ್ವಾತಂತ್ರ್ಯ ಪೂರ್ವದಲ್ಲೇ ಬುನಾದಿ ಹಾಕಿದ್ದರು’ ಎಂದು ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ ಹೇಳಿದರು.

ಭಾರತ ಸೇವಾ ದಳವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಭಾಷ್ ಚಂದ್ರಬೋಸ್‌ರ ಜಯಂತಿಯಲ್ಲಿ ಮಾತನಾಡಿ, ‘ಸುಭಾಷ್‌ಚಂದ್ರ ಬೋಸ್‌ ಭಾರತ ದೇಶವು ಬಲಿಷ್ಠ ಸೇನೆ ಹೊಂದಬೇಕೆಂದು ಕನಸ್ಸು ಕಂಡಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಲಕ್ಷಾಂತರ ಯೋಧರು ಸಜ್ಜಾಗಿದ್ದಾರೆ. ಸಮಾಜವು ಯೋಧರ ಸೇವೆ ಗೌರವಿಸುತ್ತಿರುವುದು ಸ್ವಾಗತಾರ್ಹ’ ಎಂದರು.

‘ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಿ ಗೌರವ ಸಲ್ಲಿಸಬೇಕು. ಸುಭಾಷ್‌ಚಂದ್ರ ಬೋಸ್‌ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಕ್ರಿಯಾಶೀಲ ಸೇನಾನಿ. ಅವರ ಆದರ್ಶ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಬೋಸ್‌ ಅವರು ಇಂಗ್ಲೆಂಡ್‌ನಲ್ಲಿ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾರ್ಯ ನಿರ್ವಹಿಸುವಾಗ ಬ್ರಿಟೀಷರ ಅಡಿಯಾಳಾಗಿ ಕೆಲಸ ಮಾಡಲು ನಿರಾಕರಿಸಿದರು. ನಂತರ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು. ಚಿತ್ತರಂಜನ್‌ ಜತೆಗೂಡಿ ಸ್ವರಾಜ್ಯ ಪಕ್ಷ ಸ್ಥಾಪಸಿ ಯುವಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದು ವಿವರಿಸಿದರು.

ಪರಾಕ್ರಮ ದಿವಸ್: ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‌ಚಂದ್ರ ಬೋಸ್ ಹಾಗೂ ಹರ್ಡೀಕರ್ ನಡುವೆ ಸಾಮ್ಯತೆ ಇದೆ. ಬೋಸ್‌ರ ಜನ್ಮ ಜಯಂತಿಯನ್ನು ಪರಾಕ್ರಮ ದಿವಸ್ ಆಗಿ ಆಚರಿಸಲಾಗುತ್ತಿದೆ’ ಎಂದು ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.

‘ಸುಭಾಷ್‌ಚಂದ್ರ ಬೋಸ್‌ ಇಂಡಿಯನ್ ನ್ಯಾಷನಲ್ ಆರ್ಮಿ ಪಡೆಯ ಮೂಲಕ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಹರ್ಡೀಕರ್ ದೇಶದೆಲ್ಲೆಡೆ ಹಿಂದೂಸ್ತಾನ್ ಸೇವಾದಳ ಸಂಘಟಿಸಿ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜುಗೊಳಿಸಿದರು’ ಎಂದು ಮಾಹಿತಿ ನೀಡಿದರು.

ದಾರಿ ದೀಪ: ‘ದೇಶ ಪ್ರೇಮಿಗಳ ತತ್ವಾದರ್ಶವು ಸಮಾಜಕ್ಕೆ ದಾರಿ ದೀಪ. ದೇಶಕ್ಕಾಗಿ ಪ್ರಾಣತೆತ್ತವರ ಕುಟುಂಬಗಳನ್ನು ಸಮಾಜ ಕಾಪಾಡಿಕೊಳ್ಳಬೇಕು. ಸುಭಾಷ್‌ಚಂದ್ರ ಬೋಸ್ ದೇಶ ವಿದೇಶ ಸುತ್ತಿ ಯುವ ಜನಾಂಗ ಸಂಘಟಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ಅವರು ಯುವ ಪೀಳಿಗೆಗೆ ಸ್ಫೂರ್ತಿ’ ಎಂದು ಸೇವಾ ದಳ ಜಿಲ್ಲಾ ಸಮಿತಿ ಸದಸ್ಯ ವಿ.ಪಿ.ಸೋಮಶೇಖರ್ ಅಭಿಪ್ರಾಯಪಟ್ಟರು.

‘ಬ್ರಿಟೀಷ್ ಸೇನೆಯಲ್ಲಿ ಉತ್ತಮ ಅಧಿಕಾರಿಯಾಗಿದ್ದರೂ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರತ್ಯೇಕ ಪಡೆ ಕಟ್ಟಿದ ಸುಭಾಷ್‌ಚಂದ್ರ ಬೋಸ್ ಎಲ್ಲರಿಗೂ ಮಾದರಿ. ಅವರ ಆದರ್ಶಗಳನ್ನು ಸೇವಾ ದಳದ ಮೂಲಕ ಶಾಲಾ ಮಕ್ಕಳಿಗೆ ತಲುಪಿಸಬೇಕು’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಹೇಳಿದರು.

ಸೇವಾ ದಳ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುಧಾಕರ್, ಸಂಘಟಕ ದಾನೇಶ್, ಸದಸ್ಯ ಬೈರೇಗೌಡ, ತಾಲೂಕು ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕಾರ್ಯದರ್ಶಿ ಶ್ರೀರಾಮ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.